ದಕ್ಷಿಣ ಕನ್ನಡ : ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಮೀನಾಡಿ ಎಂಬಲ್ಲಿ ನಡೆದಿದೆ.
ಆನೆ ದಾಳಿಗೆ ರಂಜಿತಾ (21) ಹಾಗೂ ರಮೇಶ್ ರೈ (55) ಎಂಬುವವರು ಸಾವನ್ನಪ್ಪಿದ್ದಾರೆ. ರಂಜಿತಾ ಸ್ಥಳೀಯ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡನೆಯೊಂದು ಏಕಾಏಕಿ ಈಕೆಯ ಮೇಲೆ ದಾಳಿ ನಡೆಸಿದೆ.
ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬುವವರ ಮೇಲೆಯೂ ಆನೆ ದಾಳಿ ನಡೆಸಿದ್ದು, ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಂಜಿತಾ ಅವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇಬ್ಬರ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಘಟನಾ ಸ್ಥಳದಲ್ಲಿಯೇ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಈ ಕುರಿತು ಪಂಚಾಯತ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.










