ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ – ರೂಪಾ ಆರೋಪಕ್ಕೆ ರೋಹಿಣಿ ಪ್ರತಿಕ್ರಿಯೆ…

106
firstsuddi

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಆರೋಪಗಳಿಗೆ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಬಹಿರಂಗವಾಗಿ ಮಾತನಾಡುವ ವಿಚಾರ ಅಲ್ಲ. ಈ ರೀತಿ ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ಪ್ರೊಫೆಷನಲ್ ವಿಚಾರ ಮಾತಾಡಲಿ ಆದರೆ ಪರ್ಸನಲ್ ವಿಚಾರ ಮಾತಾಡುವಾಗ ಎಚ್ಚರ ಇರಬೇಕು. ಆಲ್ ಐ ಕ್ಯಾನ್ ಸೇ ಗೆಟ್ ವೆಲ್ ಸೂನ್ ಎಂದು ಡಿ ರೂಪಾಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನು ಇಲ್ಲಿಗೇ ಬಿಡುವ ಪ್ರಶ್ನೆಯಿಲ್ಲ, ಅವರು ತಮ್ಮ ವರ್ತನೆಯನ್ನು ಮುಂದುವರಿಸಿದರೆ ಖಂಡಿತಾ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ವೃತ್ತಿಪರವಾಗಿ ಏನು ಬೇಕಾದರೂ ಮಾತನಾಡಲಿ, ವೈಯಕ್ತಿಕ ವಿಷಯದಲ್ಲಿ ಮಾತನಾಡಿದರೆ ನಾನು ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಈ ಬಗ್ಗೆ ನನ್ನ ಪತಿ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ವಿಧಾನಸೌಧ ಅಂಗಳಕ್ಕೆ ಐಪಿಎಸ್, ಐಎಎಸ್ ಕಿತ್ತಾಟ ತಲುಪಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಅವರನ್ನು ಭೇಟಿಯಾಗಿ ರೋಹಿಣಿ ದೂರು ಸಲ್ಲಿಕೆ ಮಾಡಿ ರೂಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿಗಳಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ರೂಪಾ ಅವರು ಕಾನೂನು ವ್ಯಾಪ್ತಿ ಮೀರಿದ್ದಾರೆ, ಪದೇ ಪದೆ ನಮ್ಮ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ,ಸೋಷಿಯಲ್ ಮಿಡಿಯಾದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಅಧಿಕಾರಿಗಳು ಮಾತನಾಡಬಾರದು ಎಂದು ಸುತ್ತೋಲೆ ನಿಯಮವಿದೆ. ರೂಪಾ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಬಂದಿದ್ದೇನೆ. ಅದರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಳಿದ್ದೇನೆ ಎಂದರು.

ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರ ಕಾರ್ಯವ್ಯಾಪ್ತಿಗೂ ನಮಗೂ ಸಂಬಂಧವಿಲ್ಲ. ಅವರದ್ದು ಸೇವೆಯ ವ್ಯಾಪ್ತಿಯೇ ಬೇರೆ, ನನ್ನ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟಾರ್ಗೆಟ್ ಮಾಡಿ ಹಾಕುತ್ತಿದ್ದಾರೆ. ನನ್ನ ಅಕೌಂಟ್ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ನಾನು ಮೂವರು ಅಧಿಕಾರಿಗಳಿಗೆ ನನ್ನ ವೈಯಕ್ತಿಕ ಫೋಟೋಗಳನ್ನು ಕಳುಹಿಸಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೆ. ಆ ಮೂವರು ಅಧಿಕಾರಿಗಳ ಹೆಸರನ್ನು ರೂಪಾ ಅವರು ಬಹಿರಂಗಪಡಿಸಲಿ ರೂಪಾ ಅವರಿಗೆ ರೋಹಿಣಿ ಸವಾಲು ಹಾಕಿದರು.