ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗಿಲ್ಲ : ಅನಿತಾ ಕುಮಾರಸ್ವಾಮಿ ವಿರುದ್ಧ ಅಶ್ವತ್ಥ್ ನಾರಾಯಣ್ ಗುಡುಗು…

64
firstsuddi

ರಾಮನಗರ: ಜಿಲ್ಲೆಯ ಐದನೇ ತಾಲೂಕಾಗಿ ಹಾರೋಹಳ್ಳಿ ರಚನೆ ಆಗಿದ್ದು, ನಿನ್ನೆ ತಾಲೂಕು ಉದ್ಘಾಟನೆ ಅದ್ದೂರಿಯಾಗಿ ನೆರವೇರಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ಜಟಾಪಟಿ ನಡೆದಿತ್ತು.

ಅನಿತಾ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕಿಯನ್ನು ಬಿಟ್ಟು ನೂತನ ತಾಲೂಕು ಕೇಂದ್ರ ಉದ್ಘಾಟನೆ ಮಾಡಿದ್ದಾರೆ. ಇದು ಶಿಷ್ಟಾಚಾರ ಉಲ್ಲಂಘನೆ ಹಾಗೂ ಓರ್ವ ಮಹಿಳಾ ಜನಪ್ರತಿನಿಧಿಗೆ ಮಾಡಿರುವ ಅವಮಾನ, ಈ ಬಗ್ಗೆ ಸಭಾಧ್ಯಕ್ಷರಿಗೆ ದೂರು ನೀಡುವುದಾಗಿ ಕಿಡಿಕಾರಿದ್ದರು. ಇದೀಗ ಇದಕ್ಕೆ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?: ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಅನಿತಾ ಕುಮಾರಸ್ವಾಮಿ ಅವರಿಗೆ ಅಪಮಾನಿಸಲಾಗಿದೆ ಎಂಬರ್ಥದ ಮಾತನ್ನು ಕೇಳಿ ಆಶ್ಚರ್ಯವಾಯಿತು. ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ.

ನಮ್ಮ ರಾಮನಗರ ಜಿಲ್ಲೆಯ ಜನತೆಯ ಶ್ರೇಯವೇ ನನ್ನ ಆದ್ಯತೆ. ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ. ಬಿಜೆಪಿ ಸರ್ಕಾರ ಬರುವ ಮೊದಲು ಅಭಿವೃದ್ಧಿ ಹೇಗೆ ಕುಂಠಿತವಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸ ಆಗಿವೆ. ಇದು ಜನರಿಗೂ ಗೊತ್ತಿದೆ, ದಾಖಲೆಗಳೂ ಹೇಳುತ್ತವೆ.

ಹಾರೋಹಳ್ಳಿ ಪ್ರತ್ಯೇಕ ತಾಲೂಕು ರಚನೆಯಲ್ಲಿ ಕುಮಾರಸ್ವಾಮಿ ಅವರ ಕೊಡುಗೆಯ ಬಗ್ಗೆ ವೇದಿಕೆಯಲ್ಲಿ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿಯಾಗಲಿ, ಕೆಲಸವನ್ನೇ ಮಾಡದೇ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನ್ನಲ್ಲಿಲ್ಲ. ನೇರ ನುಡಿ, ಅಭಿವೃದ್ಧಿಪರ ರಾಜಕಾರಣ ನನ್ನದು ಎಂದು ಅನಿತಾ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.