ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನು ಅಮಾನತು ಮಾಡುವಂತೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹೆಚ್ ವಿಶ್ವನಾಥ್, ರಾಜ್ಯದ ಹಿರಿಯ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಬೀದಿ ಜಗಳ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಧಾರಾವಾಹಿಯಾಗಿ 3 ದಿನಗಳಿಂದ ಪ್ರಾರಂಭವಾಗಿದೆ ಎಂದರು.
ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ ಮಹೇಶ್ ನಡುವಿನ ಆರೋಪಗಳ ಬಗ್ಗೆ ಸಂಧಾನವನ್ನು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸುತ್ತಿರುವ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಅವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ? ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಮಾಡಿರುವ ಆರೋಪಗಳು ಇನ್ನೂ ಮುಕ್ತಾಯವಾಗದೇ ಇರುವ ಸಂದರ್ಭದಲ್ಲಿ ಸಂಧಾನ ನಡೆಸಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೂಪಾ ಮೌದ್ಗಿಲ್ ಮೇಲೂ ಸಹ ಕರಕುಶಲ ನಿಗಮದಲ್ಲಿ ಹಲವಾರು ಆಪಾದನೆಗಳಿದ್ದು, ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರು ಮೌನವಾಗಿದ್ದಾರೆ. ಇವೆಲ್ಲವನ್ನೂ ಮಾಧ್ಯಮಗಳ ಮೂಲಕ ನೋಡುತ್ತಿರುವ ನಾಡಿನ ಜನರು ನಮ್ಮ ಆಡಳಿತದ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಅರ್ಥೈಸುತ್ತಿದ್ದಾರೆ. ನಾಡಿನ ಆಡಳಿತ ಮತ್ತು ಅಭಿವೃದ್ಧಿಯ ಹಿತಕ್ಕೆ ಮಾರಕವಾಗಿರುವ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು, ವಿಚಾರಣೆ ಪ್ರಾರಂಭಿಸಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಅಧಿಕಾರಿಗಳ ಇಂತಹ ನಡವಳಿಕೆಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಜನರಲ್ಲಿ ಭಾವನೆ ಮೂಡಿಸಬೇಕು ಎಂದರು.
ನೈತಿಕತೆ ಕಳೆದುಕೊಂಡ ನಡತೆಗೆಟ್ಟ ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ? ಕೂಡಲೇ ಈ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್, ಸರ್ಕಾರದ ಎಲ್ಲಾ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ತಿಳಿಸುವ ಅಧಿಕಾರಿಗಳು ಇವರು. ಈಗಾಗಲೇ ಈ ಚಟುವಟಿಕೆ ಗಮನಿಸಿ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ. ಆದರೆ ಅವರಿಗೆ ಜಾಗ ತೋರಿಸಿಲ್ಲ. ಈ ಪ್ರಕರಣದಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.










