ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.
ರೋಸ್ ಅವಿನ್ಯೂ ವಿಶೇಷ ನ್ಯಾಯಾಧೀಶ ಎಂಕೆ ನಾಗಪಾಲ್ ಅವರ ಮುಂದೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಇಂದು ಹಾಜರುಪಡಿಸಿತ್ತು. ವಿಚಾರಣೆಗಾಗಿ ಅವರನ್ನು ಐದು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿದ್ದು, ಇದಕ್ಕೆ ಒಪ್ಪಿದ ಕೋರ್ಟ್ ಮಾರ್ಚ್ 4ರವರೆಗೆ ಸಿಸೋಡಿಯಾ ಅವರನ್ನು ಕಸ್ಟಡಿಗೆ ನೀಡಿ ಆದೇಶಿಸಿದೆ.
ಹಗರಣದಲ್ಲಿ ಪ್ರಮುಖ ಆರೋಪಿತರಾಗಿರುವ ಮನೀಶ್ ಸಿಸೋಡಿಯಾರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ನಿನ್ನೆ 8 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಬಂಧಿಸಿತ್ತು.
ಹೊಸ ಮದ್ಯ ನೀತಿಯಡಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಲು ದೆಹಲಿ ಸರ್ಕಾರ ಲಂಚವನ್ನು ಪಡೆದಿದೆ ಎಂದು ಆರೋಪಿಸಲಾಗಿದ್ದು, ಖಜಾನೆಗೆ ನಷ್ಟ, ರಾಜ್ಯಕ್ಕೆ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಸಿಸೋಡಿಯಾ ಬಂಧನ ವಿರೋಧಿಸಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆಯೂ ಚಂಡೀಗಢ, ದೆಹಲಿ, ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಇತರ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಗೆ ತಮ್ಮ ತಮ್ಮ ಕ್ಷೇತ್ರಗಳಿಂದ ಜನರನ್ನು ಒಟ್ಟುಗೂಡಿಸಲು ಎಲ್ಲಾ ಶಾಸಕರಿಗೆ ಪಕ್ಷ ತಿಳಿಸಿದೆ ಎಂದು ವರದಿಯಾಗಿದೆ.










