ಮಧ್ಯಂತರ ವರದಿ ಬಂದ ಕೂಡಲೇ 7ನೇ ವೇತನ ಆಯೋಗ ಜಾರಿ : ಬೊಮ್ಮಾಯಿ.

55
firstsuddi

ಹುಬ್ಬಳ್ಳಿ : 7ನೇ ವೇತನ ಆಯೋಗದ ಜಾರಿಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಿದ್ಧಪಡಿಸುತ್ತಿದ್ದೇವೆ. ಮಧ್ಯಂತರ ವರದಿ ಬಂದ ಕೂಡಲೇ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಧ್ಯಂತರ ವರದಿ ಪಡೆದು ವೇತನ ಪರಿಷ್ಕರಣೆ ಮಾಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಾವು ಕೂಡಲೇ 7 ನೇ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ. ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ ಎಂದರು.

ಹುಬ್ಬಳಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ. ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ, ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. 

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ. ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಬಹಳ ಸೇವೆಯನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯದ್ದೂ ನಡೆಯುತ್ತದೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು.