ನವದೆಹಲಿ : ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಸಮಿತಿ ರಚನೆ ಮಾಡಿದೆ.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ನಿರ್ದಿಷ್ಟ ಕಾನೂನು ರಚನೆಯಾಗುವವರೆಗೆ ಚುನಾವಣಾ ಆಯಕ್ತರ ನೇಮಕದಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅತಿದೊಡ್ಡ ಏಕೈಕ ಪಕ್ಷ) ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅವರನ್ನೊಳಗೊಂಡ ಸಮಿತಿಯ ಸಲಹೆ ಪಡೆಯುವಂತೆ ಕೋರ್ಟ್ ಆದೇಶ ನೀಡಿದೆ. ಸಮಿತಿಯ ಶಿಫಾರಸು ಆಧರಿಸಿ ರಾಷ್ಟ್ರಪತಿಗಳು ಆಯುಕ್ತರನ್ನು ನೇಮಕ ಮಾಡಲಿದ್ದಾರೆ ಎಂದು ಹೇಳಿದೆ.
ಚುನಾವಣೆಗಳು ನಿಸ್ಸಂದೇಹವಾಗಿ ನ್ಯಾಯಯುತವಾಗಿರಬೇಕು. ಚುನಾವಣೆಗಳು ಶುದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಸರ್ವೋಚ್ಛ ನ್ಯಾಯಾಲಯವು ಭಾರತದ ಚುನಾವಣಾ ಆಯೋಗದೊಂದಿಗೆ ಅತ್ಯಂತ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಕೋರ್ಟ್ ಹೇಳಿದೆ.










