ಹೈದರಾಬಾದ್ : ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್ಎಸ್ ಎಂಎಲ್ಎ ಕೆ.ಕವಿತಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
‘ಸೌತ್ ಗ್ರೂಪ್ ನ’ ಪ್ರಮುಖ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರ ಬಂಧನ ನಂತರ ಈ ಬೆಳವಣಿಗೆ ನಡೆದಿದೆ. ಎಎಪಿ ನಾಯಕರಿಗೆ 100 ಕೋಟಿ ರೂ ಆಫರ್ ನೀಡಿದ ಸೌತ್ ಗ್ರೂಪ್ ಇಂಡೋ ಸ್ಪಿರಿಟ್ ನಲ್ಲಿ ಕವಿತಾ ಪರವಾಗಿ ಅರುಣ್ ಪಾಲುದಾರರಾಗಿದ್ದಾರೆ ಎಂದು ಹೇಳಲಾಗಿದೆ.
ನವದೆಹಲಿಯಲ್ಲಿ ಮದ್ಯ ಮಾರಾಟದ ನಿಯಮಗಳನ್ನು ಬದಲಿಸುವ ಮಹತ್ವದ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ನೇತೃತ್ವದ ಸರ್ಕಾರ ತೆಗೆದುಕೊಂಡಿತ್ತು. ಖಾಸಗಿ ಸಂಸ್ಥೆಗಳು ರಿಟೇಲ್ ಲಿಕ್ಕರ್ ವಲಯ ಪ್ರವೇಶಿಸಲು ಅನುಕೂಲ ಮಾಡಿ ಕೊಡಲು ದೆಹಲಿ ಅಬಕಾರಿ ನೀತಿ 2021-22 ಅನ್ನು ಅನುಷ್ಠಾನಗೊಳಿಸಲಾಗಿತ್ತು. ಇದರಲ್ಲಿ ಪರವಾನಗಿ ನೀಡುವುದು, ಪರವಾನಗಿ ಶುಲ್ಕ ಮನ್ನಾ ಮತ್ತು ಕಡಿತ ಹಾಗೂ ಎಲ್-1 ಪರವಾನಗಿ ಅನುಮೋದನೆಯನ್ನು ಇಲ್ಲದೇ ವಿಸ್ತರಿಸುವ ಮೂಲಕ ಲಂಚ ಪಡೆದು ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ನೀತಿಯನ್ನು ನಂತರ ರದ್ದುಪಡಿಸಲಾಯಿತು.










