ದೆಹಲಿ ಶಾಸಕರ ವೇತನ ಶೇ.66 ರಷ್ಟು ಹೆಚ್ಚಳ…

59
firstsuddi

ನವದೆಹಲಿ : ದೆಹಲಿ ಶಾಸಕರ ವೇತನ ಭತ್ಯೆ, ಪಿಂಚಣಿ ತಿದ್ದುಪಡಿಗೆ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 17 ರಿಂದ ಪ್ರಾರಂಭವಾಗಲಿರುವ ದೆಹಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ಶೇ 66ಕ್ಕಿಂತ ಜಾಸ್ತಿ ಹೆಚ್ಚಿಸಲಾಗಿದೆ.

ದೆಹಲಿ ಸರ್ಕಾರದ ಕಾನೂನು ಇಲಾಖೆಯ ಅಧಿಸೂಚನೆಯ ಪ್ರಕಾರ, ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ನಿಂದ 90,000 ರೂ.ಗೆ ಏರಿಕೆಯಾಗಿದೆ. ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ನಿಂದ 1,70,000 ರೂ.ಗೆ ಏರಿಕೆಯಾಗಿದೆ.

ಶಾಸಕರ ಮೂಲ ವೇತನ ಮಾಸಿಕ 12 ಸಾವಿರದಿಂದ 30 ಸಾವಿರಕ್ಕೆ ಹಾಗೂ ಸಚಿವರ ಮೂಲ ವೇತನ ಮಾಸಿಕ 20 ಸಾವಿರದಿಂದ 60 ಸಾವಿರಕ್ಕೆ ಏರಿಕೆಯಾಗಿದೆ. ದಿನಭತ್ಯೆ ಕೂಡ 1000 ರೂ. ನಿಂದ 1500 ರೂ.ಗೆ ಏರಿಕೆಯಾಗಿದೆ.

2022ರ ಜುಲೈನಲ್ಲಿ, ದೆಹಲಿ ವಿಧಾನಸಭೆಯು ಶಾಸಕರು ಮತ್ತು ಸಚಿವರ ವೇತನವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತ್ತು. ಇದನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿತ್ತು. ಇದೀಗ ಈ ಕ್ರಮಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಹೊಸ ವೇತನದ ನಿಯಮ ಫೆಬ್ರವರಿ 14ರಿಂದ ಜಾರಿಗೆ ಬಂದಿದೆ.