ಮುಂಬರುವ ದಿನಗಳಲ್ಲಿ ಕುವೆಂಪು ವಿವಿಯಲ್ಲಿ ಜಾನಪದ ಸಮ್ಮೇಳನ : ಬಿ.ಪಿ.ವೀರಭದ್ರಪ್ಪ

62
firstsuddi

ಚಿಕ್ಕಮಗಳೂರು: ಮುಂಬರುವ ದಿನಗಳಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನವನ್ನು ನಡೆಸಲಾಗುವುದು ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

ಅಜ್ಜಂಪುರ ತಾಲೂಕಿನ ನಂದಿಪುರ ಹಿರೇಮಠದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್‍ನಿಂದ ನಿನ್ನೆ ನಡೆದ ಶಿವನಿ ಹೋಬಳಿ ಮಟ್ಟದ ಪ್ರಥಮ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಮೂಲವಾಗಿರುವ ಜಾನಪದದಲ್ಲಿ ಜೀವ ಮತ್ತು ಆತ್ಮವಿದೆ ಆಧುನಿಕತೆ ಬೆಳೆದಂತೆ ಜಾನಪದ ಸಂಸ್ಕೃತಿ ನೆಲೆ ಕಳೆದುಕೊಳ್ಳುತ್ತಿದೆ. ಹಾಗಾಗಿ ಅದನ್ನು ನವೀಕರಣಗೊಳಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕುವೆಂಪು ವಿವಿಯಲ್ಲಿ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲಿದ್ದು, ಸ್ಥಳೀಯ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉಪನ್ಯಾಸ ನೀಡಿದ ಮಹಾಲಿಂಗಪ್ಪ, ಅಕ್ಷರ ಸಂಸ್ಕೃತಿಗಿಂತ ಮೊದಲು ಹುಟ್ಟಿದ್ದು ಜಾನಪದ ಸಂಸ್ಕೃತಿ. ಅಜ್ಜಂಪುರ ಜಾನಪದದ ತವರೂರು ಎಂದರು.

ಸಮ್ಮೇಳನಾಧ್ಯಕ್ಷ ಹಿರಿಯ ವೀರಗಾಸೆ ಕಲಾವಿದ ಕೆ.ಸಿ.ಬಸವರಾಜಪ್ಪ ಮಾತನಾಡಿ, ಸರ್ಕಾರ ಜಾನಪದವನ್ನು ಉಳಿಸಲು ಮುಂದಾಗಬೇಕು. ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ನಾನು ಕಲಿತ ವಿದ್ಯೆ ನನ್ನೊಂದಿಗೇ ಮಣ್ಣು ಪಾಲಾಗಬಾರದು. ಕಲೆ ನಿಂತ ನೀರಾಗಬಾರದು, ಅದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು ಎಂಬ ಉದ್ದೇಶದಿಂದ ಕಲಾಸಂಘವನ್ನು ಸ್ಥಾಪಿಸಿ ವೀರಗಾಸೆ ಕಲೆಯ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.

ಆಶಯ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಜನಸಾಮಾನ್ಯರ ಜೀವನಾನುಭವದಿಂದ ಅರಳಿದ ಹೂವು. ಆಧುನಿಕತೆಯ ತಾಪಕ್ಕೆ ಸಿಲುಕಿ ಅದುಬಾಡುತ್ತಿದೆ ಎಂದು ವಿಷಾದಿಸಿದರು.

ಮುಂದಿನ ಪೀಳಿಗೆಗೆ ಜಾನಪದವನ್ನು ಉಳಿಸುವುದು ಅನಿವಾರ್ಯವಾಗಿದ್ದು, ಮುಖ್ಯವಾಗಿ ಇಂದಿನ ಮಕ್ಕಳಲ್ಲಿ ಜಾನಪದ ಕಲೆಗಳತ್ತ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಜಾನಪದವೆಂದರೆ ಕೇವಲ ಹಾಡಲ್ಲ. ಅದರಲ್ಲಿ 250 ರಿಂದ 400 ಕಲೆಗಳು, ಪ್ರಾಕಾರಗಳು ಅಡಗಿವೆ ಎಂದು ಹೇಳಿದರು.

ಯಳನಡು ಮಠದಶ್ರೀ ಜ್ಞಾನಪ್ರಭು ಸಿದ್ಧರಾಮದೇಶಿ ಕೇಂದ್ರ ಸ್ವಾಮೀಜಿ, ನಂದೀಪುರ ಹಿರೇಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ತಹಶೀಲ್ದಾರ್ ಸುಮ ಎಸ್.ಜೋಶಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಎನ್.ಈಶ್ವರಪ್ಪ, ಎ.ಸಿ.ಚಂದ್ರಪ್ಪ, ಬೆಣಕುಣಸೆ ಎಸ್. ಮರುಳಸಿದ್ದಪ್ಪ, ಮಂಜುಳಾ, ಮಹೇಶ್, ವಿಶಾಲಾಕ್ಷಮ್ಮ, ಗಾಯತ್ರಿ ಉಪಸ್ಥಿತಿತರಿದ್ದರು.

ಸಮಾರಂಭಕ್ಕೆ ಮುನ್ನ ಸಮ್ಮೇಳನಾಧ್ಯಕ್ಷ ಕೆ.ಸಿ.ಬಸವರಾಜಪ್ಪ ಅವರ ಮೆರವಣಿಗೆ ವಿವಿಧ ಜಾನಪದಕಲಾ ತಂಡಗಳ ನಡುವೆ ನಡೆಯಿತು. ಕ.ಜಾ.ಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ರಾಷ್ಟ್ರಧ್ವಜವನ್ನು, ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ನಾಡಧ್ವಜ, ಕೆ.ಸಿ.ಬಸವರಾಜ್ ಜಾನಪದ ಧ್ವಜಾರೋಹಣ ಮಾಡಿದರು. ಇದೇ ವೇಳೆ ಜಾನಪದ ಪರಿಷತ್ತಿನ ಕಲಾವಿದರಿಂದ ನಡೆದ ಗೀತ ಮಾಧುರ್ಯ ಮತ್ತು ನೃತ್ಯ ಗಮನ ಸೆಳೆದವು.