ಪಿಯುಸಿಯಲ್ಲಿ ವಧುವಿಗೆ ಕಡಿಮೆ ಅಂಕ – ಮದುವೆ ರದ್ದುಗೊಳಿಸಿದ ವರ…

50
firstsuddi

ಲಕ್ನೋ : ವಧುವೊಬ್ಬಳು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ಮದುವೆಯಾಗಲು ನಿರಾಕರಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ಕನೌಜ್ ಜಿಲ್ಲೆಯಲ್ಲಿ ನಡೆದಿದೆ.

ವರದಿಯ ಪ್ರಕಾರ, ವಧುವಿನ ಕುಟುಂಬವು ತಮ್ಮ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ. ಆದರೆ, 12ನೇ ತರಗತಿ ಅಂಕಪಟ್ಟಿಯಲ್ಲಿ ಬಾಲಕಿಗೆ ಕಡಿಮೆ ಅಂಕ ಬಂದಿದೆ. ಇದರಿಂದಾಗಿ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ.

ಬಾಗಂವ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬಾತನೊಂದಿಗೆ ಸೋನಿ ಎಂಬಾಕೆಯ ಮದುವೆಯನ್ನು ನಿಶ್ಚಯಿಸಲಾಗಿತ್ತು. 60 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ವರನಿಗೆ 15 ಸಾವಿರ ಮೌಲ್ಯದ ಬಂಗಾರದ ಉಂಗುರವನ್ನೂ ನೀಡಿ ಸಮಾರಂಭ ಏರ್ಪಡಿಸಿದ್ದರು.

ಮರುದಿನವೇ ವರನ ಮನೆಯವರು ವರದಕ್ಷಿಣೆ ಬೇಡಿಕೆ ಮುಂದಿಟ್ಟಿದ್ದಾರೆ. ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ವರನ ಕುಟುಂಬವು ಹುಡುಗಿ 12ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಹೇಳಿ ಮದುವೆಯನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಧುವಿನ ಮನೆಯವರು ತಮ್ಮ ಸಂಬಂಧಿಕರ ಮೂಲಕ ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೆ ವರನ ಕುಟುಂಬವು ವರದಕ್ಷಿಣೆ ನೀಡದಿದ್ದರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ. ವಧುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.