ವಾಷಿಂಗ್ಟನ್: ಎರಡು ವರ್ಷಗಳ ನಿಷೇಧದ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳು ಇದೀಗ ಮರಳಿ ಬಂದಿದೆ.
ಫೇಸ್ಬುಕ್ ಹಾಗೂ ಯೂಟ್ಯೂಬ್ ಮರುಸ್ಥಾಪನೆಯಾದ ಬೆನ್ನಲ್ಲೇ ಟ್ರಂಪ್ ಪೋಸ್ಟ್ ಒಂದನ್ನು ಹಾಕಿ, ನಾನು ಮರಳಿ ಬಂದಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ಇಲ್ಲಿವರೆಗೆ ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡುವಂತಹ ಪೋಸ್ಟ್ ಗಳನ್ನು ಹಾಕಿದ್ದಕ್ಕೆ ಅವರ ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಇದೀಗ 2 ವರ್ಷಗಳ ಬಳಿಕ ಅವರ ಖಾತೆಗಳನ್ನು ಮತ್ತೆ ಸ್ಥಾಪಿಸಲಾಗಿದೆ.










