ನವದೆಹಲಿ : ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಕೂಡ ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಸದನದಲ್ಲಿ ನನ್ನನ್ನು ಶೂರ್ಪನಖಿ ಎಂದು ಮೋದಿ ಕರೆದಿದ್ದರು, ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್ ಮಾಡಿದ್ದಾರೆ.
ಮೋದಿ ಹೇಳಿದ್ದೇನು?
2018ರ ರಾಜ್ಯಸಭಾ ಕಲಾಪದಲ್ಲಿ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು, “ನಿಮ್ಮ ಸಮಸ್ಯೆ ಏನು? ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ, ದಯವಿಟ್ಟು ಸುಮ್ಮನೇ ಕುಳಿತುಕೊಳ್ಳಿ” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ವೆಂಕಯ್ಯ ನಾಯ್ಡು ಸೂಚನೆಯನ್ನೂ ಧಿಕ್ಕರಿಸಿ ರೇಣುಕಾ ನಗುವುದನ್ನು ಮುಂದುವರಿಸುತ್ತಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ. ರಾಮಾಯಣ ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ” ಎಂದು ಲೇವಡಿ ಮಾಡುತ್ತಾರೆ. ಮೋದಿ ರಾಮಾಯಣದ ಉದಾಹರಣೆ ನೀಡಿ ರೇಣುಕಾ ಚೌಧರಿ ಅವರ ಕಾಲೆಳೆಯುತ್ತಿದ್ದಂತೆ ಬಿಜೆಪಿ ಸಂಸದರು ಬೆಂಚನ್ನು ಕುಟ್ಟಿ ಜೋರಾಗಿ ನಗಲು ಶುರು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.










