ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಮಗುವನ್ನು 4.5 ಲಕ್ಷಕ್ಕೆ ಮಾರಿದ ತಾಯಿ!

54
firstsuddi

ರಾಂಚಿ: ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಮಾರಾಟ ಮಾಡಿರುವ ಘಟನೆ ಜಾರ್ಖಂಡ್ ನ ಛತ್ರ ಜಿಲ್ಲೆಯಲ್ಲಿ ನಡೆದಿದೆ.

ನವಜಾತ ಶಿಶುವನ್ನು ಮಾರಾಟ ಮಾಡಿದ ಮಹಿಳೆಯನ್ನು ಆಶಾ ದೇವಿ ಎಂದು ಗುರುತಿಸಲಾಗಿದೆ. ಆಕೆಗೆ ಹುಟ್ಟಿದ ಗಂಡು ಮಗುವನ್ನು 4.5 ಲಕ್ಷ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಮಗುವಿನ ತಾಯಿ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್, ಆಶಾ ದೇವಿಯಿಂದ 1 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲಿಗೆ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಡಿಂಪಲ್ ದೇವಿ ಎಂಬವರಿಗೆ ಮಾರಿರುವುದಾಗಿ ತಿಳಿಸಿದ್ದಾಳೆ. ಬಳಿಕ ಡಿಂಪಲ್ ದೇವಿಯನ್ನು ಪೊಲೀಸರು ಬಂಧಿಸಿ, ಇತರ ಆರೋಪಿಗಳ ಬಗ್ಗೆ ಮಾಹಿತಿ ಪಡೆದು, ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಆಶಾ ದೇವಿ ಹಾಗೂ ಆಕೆಯ ಪತಿ 4.5 ಲಕ್ಷ ರೂ. ಹಣಕ್ಕಾಗಿ ಮಗುವನ್ನು ಮಾರಾಟ ಮಾಡಲು ಛತ್ರ ಹಾಗೂ ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆಶಾ ದೇವಿ ಮಗುವಿಗೆ ಜನ್ಮ ನೀಡಿದ ಬಳಿಕ ಅದನ್ನು ಮಾರಿ 1 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾಳೆ. ಉಳಿದ 3.5 ಲಕ್ಷ ರೂ. ಹಣವನ್ನು ದಲ್ಲಾಳಿಗಳು ಹಂಚಿಕೊಂಡಿದ್ದಾರೆ. ಈ ಬಗ್ಗೆ ಛತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.