ಬೆಂಗಳೂರು : ದೇಶದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಸಮರ ಸಾರಿದೆ. ಜನರಿಗೆ ಡ್ರಗ್ಸ್ ಮುಕ್ತ ರಾಜ್ಯ, ದೇಶ ಮಾಡೋದು ಈ ಅಭಿಯಾನದ ಉದ್ದೇಶ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಾಲಾ – ಕಾಲೇಜುಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಇದರ ವಿರುದ್ಧ ರಾಜ್ಯಗಳು ಸಮರ ಸಾರಬೇಕು ಎಂದು ಕರೆ ನೀಡಿದರು.
ಪಾಕಿಸ್ತಾನ, ಇರಾನ್ ಭಾಗಗಳಿಂದ ಸಮುದ್ರ ಮಾರ್ಗಗಳ ಮೂಲಕ ಡ್ರಗ್ಸ್ ಭಾರತಕ್ಕೆ ರವಾನೆಯಾಗುತ್ತಿದೆ. ಆದ್ದರಿಂದ ದಕ್ಷಿಣ ಭಾಗದ ಕೋಸ್ಟ್ ಗಾರ್ಡ್ ನಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಸಮಿತಿಗಳು ರಚನೆಯಾಗಿದ್ದು, ನಿರಂತರವಾಗಿ ಕೆಲಸ ಮಾಡಬೇಕು. ಡ್ರಗ್ಸ್ ಮುಕ್ತ ಮಾಡೋದು ಎಲ್ಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಬೇಕು. ಎಲ್ಲ ಇಲಾಖೆಗಳೂ ಇದಕ್ಕೆ ಕೈ ಜೋಡಿಸಬೇಕು. ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸೋದು, ಡ್ರಗ್ಸ್ ನಾಶ ಮಾಡೋದು, ಡ್ರಗ್ಸ್ ಮಾರಾಟದ ವಿರುದ್ಧ ಸಮರ ಸಾರೋದು ನಮ್ಮೆಲ್ಲರ ಗುರಿಯಾಗಬೇಕು ಎಂದರು.










