ನವದೆಹಲಿ: ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ. ನಾನು ಕ್ಷಮೆ ಕೇಳುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ನಾನು ವಿದೇಶಿ ಶಕ್ತಿಗಳ ಸಹಾಯ ಕೇಳಿದ್ದೇನೆ ಎಂದು ಕೆಲವು ಸಚಿವರು ನನ್ನ ಬಗ್ಗೆ ಸುಳ್ಳು ಹೇಳಿದರು ಆದರೆ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಾನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದರು.
ನಾನು ಅದಾನಿ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿದ್ದೆ. ನಾನು ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತೇನೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ. ಅದಾನಿ ಶೆಲ್ ಕಂಪನಿಗಳಿಗೆ 20,000 ಕೋಟಿ ಯಾರದ್ದು ಎಂಬ ಸರಳ ಪ್ರಶ್ನೆಯಿಂದ ಪ್ರಧಾನಿಯನ್ನು ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕ ಇದು. ಈ ಬೆದರಿಕೆ, ಅನರ್ಹತೆ ಅಥವಾ ಜೈಲು ಶಿಕ್ಷೆಗೆ ನಾನು ಹೆದರುವುದಿಲ್ಲ ಎಂದು ಹೇಳಿದರು.
ನನಗೆ ಸತ್ಯವನ್ನು ಹೊರತುಪಡಿಸಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನು ಸತ್ಯವನ್ನು ಮಾತ್ರ ಮಾತನಾಡುತ್ತೇನೆ, ಇದು ನನ್ನ ಕೆಲಸ. ನನ್ನನ್ನು ಅನರ್ಹಗೊಳಿಸಿದರೂ ಅಥವಾ ಬಂಧಿಸಿದರೂ ನಾನು ಅದನ್ನು ಮಾಡುತ್ತೇನೆ. ಈ ದೇಶ ನನಗೆ ಎಲ್ಲವನ್ನೂ ನೀಡಿದೆ ಮತ್ತು ಅದಕ್ಕಾಗಿಯೇ ನಾನು ಇದನ್ನು ಮಾಡುತ್ತೇನೆ. ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಅವರು ಹೆದರಿದ್ದರಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರ ಕಣ್ಣುಗಳಲ್ಲಿ ನಾನು ಭಯವನ್ನು ಕಂಡಿದ್ದೇನೆ. ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡಲು ಅವರು ಬಯಸುವುದಿಲ್ಲ ಎಂದರು.
ನನಗೆ ಒಂದೇ ಒಂದು ಹೆಜ್ಜೆ ಇದೆ. ಅದು ಸತ್ಯಕ್ಕಾಗಿ ಹೋರಾಡುವುದು ಮತ್ತು ಈ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು. ಅದಕ್ಕಾಗಿ ನನ್ನನ್ನು ಜೀವನಪರ್ಯಂತ ಅನರ್ಹಗೊಳಿಸಿ, ಜೈಲಿಗೆ ಹೋಗಲು ನಾನು ಸಿದ್ಧ ಎಂದು ಹೇಳಿದರು.










