ಯಾದಗಿರಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ.
ರಾಗಯ್ಯ ಹಾಗೂ ಶಿಲ್ಪಾ ಮೃತ ದುರ್ದೈವಿಗಳು. ದಂಪತಿ ವಾಸವಿದ್ದ ಮೂರು ಅಂತಸ್ತಿನ ಕಟ್ಟಡದಲ್ಲಿ ಒಂದು ಅಂತಸ್ತು ಮನೆ ಹಾಗೂ ಇನ್ನೆರಡು ಅಂತಸ್ತು ಬಟ್ಟೆ ಅಂಗಡಿ ಇತ್ತು. ಇಂದು ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿತ್ತು. ಮನೆಯೊಳಗೆ ದಟ್ಟ ಹೊಗೆ ಅವರಿಸಿಕೊಂಡಿದ್ದರಿಂದ ದಂಪತಿ ಮನೆಯಿಂದ ಹೊರಬರಲಾರದೇ ಬೆಂಕಿಗಾಹುತಿಯಾಗಿದ್ದಾರೆ.
ರಾಗಯ್ಯ ಅವರ ತಂದೆ, ತಾಯಿ ಹಾಗೂ ಮಕ್ಕಳಿಬ್ಬರು ಮನೆಯ ಕೆಳಮಹಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










