ನವದೆಹಲಿ : ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಇಂದು ವಿತ್ತೀಯ ನೀತಿ ಪ್ರಕಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಪ್ರಸ್ತುತ ರೆಪೋ ದರ ಈ ಹಿಂದಿನ ಶೇ 6.5 ದರದಲ್ಲೇ ಮುಂದುವರೆಯಲಿದೆ ಹಾಗೂ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಇದನ್ನು ಮರುಪರಿಶೀಲಿಸಲು ಆರ್ಬಿಐ ಸಿದ್ಧವಾಗಿದೆ ಎಂದರು. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ನಂತರ ಇದನ್ನು ಪ್ರಕಟಿಸಲಾಗಿದೆ.
ಇನ್ನು ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಬಾಂಡ್ ನ ಮೌಲ್ಯ ಕುಸಿದಿದೆ. ಶೇ. 7.2857ರಷ್ಟಿದ್ದ ಬಾಂಡ್ ಯೀಲ್ಡ್ ಶೇ. 7.1469ಕ್ಕೆ ಇಳಿದಿದೆ. ಇಲ್ಲಿ ಬಾಂಡ್ ಯೀಲ್ಡ್ ಎಂದರೆ ಹೂಡಿಕೆಗೆ ಪ್ರತಿಯಾಗಿ ಸಿಗುವ ರಿಟರ್ನ್. ಇಲ್ಲಿ ಬಾಂಡ್ ಮೌಲ್ಯ ಹೆಚ್ಚಿದಷ್ಟೂ ಅದರ ಯೀಲ್ಡ್ ಕಡಿಮೆ ಆಗುತ್ತದೆ.
ರೆಪೋ ದರ ಎಂದರೇನು? : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೋ ದರವಾಗಿದೆ.










