ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ವೇಳೆ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿದ್ದು, ಸದ್ಯ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಬೈಂದೂರು ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ.
ಸಿಎಂ ಹೆಲಿಕಾಪ್ಟರ್ನಲ್ಲಿ ಕೊಲ್ಲೂರಿಗೆ ಬಂದಿದ್ದಾರೆ. ಲ್ಯಾಂಡಿಂಗ್ ಜಾಗದ ಬಳಿ ಹುಲ್ಲುಗಳು ಬೆಳೆದಿತ್ತು. ಕೊನೆ ಕ್ಷಣದಲ್ಲಿ ನಿಗದಿಯಾದ ಕಾರಣ ಈ ಹುಲ್ಲುಗಳನ್ನು ತೆಗೆದಿರಲಿಲ್ಲ. ಹೆಲಿಕಾಪ್ಟರ್ ರೆಕ್ಕೆಯಿಂದಾಗಿ ಗಾಳಿ ವೇಗವಾಗಿ ಬೀಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಸಿಎಂ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮ್ಮ ಪತ್ನಿ ಚೆನ್ನಮ್ಮ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.










