ಬೆಂಗಳೂರು : ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಉಳಿದವರಿಗೆ ಪಕ್ಷ ಸ್ಥಾನಮಾನ ನೀಡಲಿದೆ ಎಂದು ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯದಲ್ಲಿ ಜಿಲ್ಲಾ ಸಮಿತಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಕೇಂದ್ರದಲ್ಲಿ ಜೆ.ಪಿ ನಡ್ಡಾ , ಮೋದಿ, ಅಮಿತ್ ಶಾ ಅವರ ನೇತೃತ್ವದಲ್ಲಿ ಕೂಡ ಸಭೆ ಮಾಡಿ ಟಿಕೆಟ್ ನೀಡಲಾಗಿದೆ. ಎಲ್ಲಾ ರೀತಿಯ ಅಭಿಪ್ರಾಯದ ಮೂಲಕವೇ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದಿರುವುದಕ್ಕೆ ಬಂಡಾಯ ಆಗೋದು ಸಾಮಾನ್ಯ. ಟಿಕೆಟ್ ಕೊಟ್ಟಿಲ್ಲ ಅಂದ್ರೆ, ಅವರಿಗೆ ಬೇರೆಯ ಜವಾಬ್ದಾರಿ ನೀಡಲಿದೆ ಅಂತ ಅರ್ಥ. ಕೇಂದ್ರಕ್ಕೆ ಕರೆಸಿಕೊಳ್ಳುವ ಕೆಲಸವೂ ಆಗಬಹುದು ಎಂದು ತಿಳಿಸಿದರು.
ಉಡುಪಿ ಶಾಸಕರು ಒಳ್ಳೆಯವರೇ. ಆದರೆ ಹೊಸಬರಿಗೆ ಅವಕಾಶ ಕೊಡಲು ಬದಲಾವಣೆ ಮಾಡಿದ್ದೇವೆ. ಪರಿವರ್ತನೆಯಿಂದ ಯಾರು ಬೇಸರ ಆಗೋದು ಬೇಡ. ಟಿಕೆಟ್ ಸಿಗದವರಿಗೂ ಒಂದು ದಾರಿ ಇದೆ. ಆ ದಾರಿಯಲ್ಲಿ ಪಕ್ಷ ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ನಮ್ಮೆಲ್ಲರಿಗೂ ಒಂದಲ್ಲೊಂದು ದಾರಿ ಇದೆ ಎಂದರು.
ಜಗದೀಶ್ ಶೆಟ್ಟರ್ ವಿಚಾರದ ಕುರಿತು ಮಾತನಾಡಿ, ಜಗದೀಶ್ ಶೆಟ್ಟರ್ ದೊಡ್ಡವರು. ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಈಶ್ವರಪ್ಪ ಅವರು ಈಗಾಗಲೇ ರಾಜಕೀಯ ನಿವೃತ್ತಿ ಹೊಂದೋದಾಗಿ ಪತ್ರ ಬರೆದಿದ್ದಾರೆ. ಅವರು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿದ್ದಾರೆ. 35-40 ವರ್ಷಗಳ ಪಕ್ಷಕ್ಕೆ ದುಡಿದಿದ್ದಾರೆ. ಅವರೆಲ್ಲರ ಕೊಡುಗೆಯನ್ನ ಪಕ್ಷ ಎಂದಿಗೂ ಮರೆಯಲ್ಲ. ಅವರಿಗಾಗಿ ಪಕ್ಷ ಏನಾದ್ರೂ ಮಾಡಲಿದೆ ಎಂದು ಅಣ್ಣಾಮಲೈ ಹೇಳಿದರು.










