ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು : ಕೆ.ಬಿ.ಸುಧಾ

77
firstsuddi

ಚಿಕ್ಕಮಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ದೇಶದಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಹೇಳಿದರು.

ನಗರದ ಬಿಎಸ್ ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಪಾರದರ್ಶಕ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ನಡೆಯಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದನ್ನು ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ, ಇತ್ತೀಚಿನ ಚುನಾವಣೆಗಳು ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿವೆ ಎಂದು ವಿಷಾದಿಸಿದರು.

ದಲಿತರು ಮತ್ತು ಕೆಳವರ್ಗದ ಜನ ಇಂದು ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವುದಕ್ಕೆ ಮೂಲ ಕಾರಣ ಅಂಬೇಡ್ಕರ್ ಅವರ ಸಂವಿಧಾನ. ಅದು ಇಡಿಯಾಗಿ ಜಾರಿಯಾಗದಿರುವುದು ದೇಶದ ದುರಂತ ಎಂದರು. ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ,ಅಂಬೇಡ್ಕರ್ ಅವರ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ದೇಶ ಪ್ರಭುದ್ಧ ರಾಷ್ಟ್ರವಾಗುತ್ತದೆ ಎಂದು ತಿಳಿಸಿದರು.

ದಲಿತರು ಮತ್ತು ಕೆಳವರ್ಗದ ಜನರ ಹಿತರಕ್ಷಣೆಗಾಗಿ ಶ್ರಮಿಸಿದ ಅಂಬೇಡ್ಕರ್ ಅವರಿಗೆ ಆ ವರ್ಗದ ಜನರು ಋಣಿಯಾಗಿರಬೇಕು ಎಂದರು.
ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಲಾಯಿತು. ಜನ್ಮದಿನದ ಪ್ರಯುಕ್ತ ಸಿಹಿ ವಿತರಿಸಲಾಯಿತು.

ಬಿಎಸ್ ಪಿ ತಾಲೂಕು ಉಪಾಧ್ಯಕ್ಷೆ ರೇಖಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳಾ ಪದಾಧಿಕಾರಿಗಳಾದ ಕುಮಾರ್, ಜಯಚಂದ್ರ, ಹೊನ್ನಪ್ಪ, ಮಂಜುಳಾ, ವಸಂತ, ಸಿದ್ದಯ್ಯ, ವೀಣಾ ಉಪಸ್ಥಿತರಿದ್ದರು.