ಬಿಜೆಪಿಗೆ ಆಯನೂರು ಮಂಜುನಾಥ್ ಗುಡ್ ಬೈ…

63
firstsuddi

ಶಿವಮೊಗ್ಗ: ಶಿವಮೊಗ್ಗ ನಗರ ಟಿಕೆಟ್ ಘೋಷಣೆಗೂ ಮುನ್ನವೇ ಆಯನೂರು ಮಂಜುನಾಥ್ ವಿಧಾನಪರಿಷತ್ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೂ ಟಿಕೆಟ್ ಸಿಗುವುದು ಖಾತ್ರಿ ಇಲ್ಲದಿರುವುದರಿಂದ ರಾಜೀನಾಮೆ ಘೋಷಿಸಿದ್ದಾರೆ.

ಇಂದು ಬೆಳಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.

ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವ ಉದ್ದೇಶ ನನ್ನದು. ಫ್ಲೆಕ್ಸ್ ನಲ್ಲಿ ಹೇಳಿದಂತೆ ಹರಕು ಬಾಯಿ ಹೊಲಿದು ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ನನ್ನ ಪ್ರಯತ್ನಕ್ಕೆ ಈಗಾಗಲೇ ಸ್ವಲ್ಪ ಮಟ್ಟಿಗೆ ಫಲ ದೊರೆತಿದೆ. ಅಶಾಂತ ನಗರ ಎಂಬ ಅಪಖ್ಯಾತಿಯಿಂದ ಶಿವಮೊಗ್ಗವನ್ನು ಮುಕ್ತವಾಗಿಸಲು ನಾನು ಬದ್ಧ. ಆ ಮೂಲಕ ನಗರಕ್ಕೆ ಉದ್ಯಮಗಳು ಬರುವಂತೆ ಮಾಡಿ ಉದ್ಯೋಗಾವಕಾಶ ಕಲ್ಪಿಸಬಯಸಿದ್ದೇನೆ ಎಂದು ನುಡಿದಿದ್ದಾರೆ.