ದೇಶದಲ್ಲೇ ಕರ್ನಾಟಕ ನಂ.1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು : ಮೋದಿ.

55
firstsuddi

ಬೀದರ್: ದೇಶದಲ್ಲೇ ಕರ್ನಾಟಕ ನಂಬರ್ 1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಜಿಲ್ಲೆಯ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ನರೇಂದ್ರ ಮೋದಿ ಮಾತನಾಡಿದರು. ‘ಜಗದ್ಗುರು ಬಸವೇಶ್ವರ, ಶಿವ ಶರಣರ ನಾಡಿಗೆ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್ ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್ ನ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಹೇಳಿದರು.

ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಹೇಳಿದ ಮೋದಿ ಭಾಷಣದುದ್ದಕ್ಕೂ ಹಲವು ಬಾರಿ ಬಹುಮತದ ಸರ್ಕಾರದ ಅಗತ್ಯವನ್ನು ಒತ್ತಿ ಹೇಳಿದರು. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕ ನಂಬರ್ 1 ರಾಜ್ಯ ಆಗಬಲ್ಲದು ಎಂದು ಹೇಳಿದರು.

ಭಾರತದ ಅಭಿವೃದ್ಧಿಯಾದರೆ ದೇಶದ ಎಲ್ಲ ಕೋಣೆ ಕೋಣೆಯೂ ಅಭಿವೃದ್ಧಿಯಾಗಲಿದೆ. ರಾಜ್ಯದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಲಿದೆ. ಕರ್ನಾಟಕದ ಜನರು ಕನಸುಗಳಿಂದ ದೂರ ಸರಿಯಬಾರದು. ಕಳೆದ ಐದು ವರ್ಷದಿಂದ ನಡೆಯುತ್ತಿರುವ ಅಭಿವೃದ್ಧಿ ನಿಲ್ಲಬಾರದು. ಅಭಿವೃದ್ಧಿ ಮುಂದುವರಿಯಲು ಬಿಜೆಪಿಗೆ ಅಧಿಕಾರ ನೀಡಬೇಕು. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಡಬಲ್ ಎಂಜಿನ್ ಸರ್ಕಾರದ ಅಗತ್ಯ ಇದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕ ನಂಬರ್ ಒನ್ ಆಗಲಿದೆ ಎಂದು ಹೇಳಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನವರು ನನ್ನನ್ನು ಬೈಯ್ಯುತ್ತಿದ್ದಾರೆ. 91 ಬಾರಿ ಕಾಂಗ್ರೆಸ್ ನವರು ನನಗೆ ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲೇ ಕಾಂಗ್ರೆಸ್ ನವರು ಸಮಯ ವ್ಯರ್ಥ ಮಾಡ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್ ನವರ ಚಾಳಿ. ಮೊದಲು ಚೌಕೀದಾರ್ ಚೋರ್ ಎಂದರು. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ.ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್ ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಕಾಂಗ್ರೆಸ್ ನವರು. ಅವರಂತ ಮಹಾನ್ ಪುರುಷರನ್ನೂ ಕಾಂಗ್ರೆಸ್ ನಿಂದಿಸಿದೆ. ವೀರ ಸಾವರ್ಕರ್ ಅವರನ್ನೂ ಕಾಂಗ್ರೆಸ್ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನೂ ನಿಂದಿಸುತ್ತಿದ್ದಾರೆ. ಮಹಾನ್ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್ ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇದ್ದಾಗ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಮೋದಿ ಹೇಳಿದರು.