ಮದುವೆಯಲ್ಲಿ ವಿಷ ಸೇವಿಸಿದ ನವ ಜೋಡಿ- ವರ ಸಾವು, ವಧು ಸ್ಥಿತಿ ಗಂಭೀರ…

58
firstsuddi

ಭೋಪಾಲ್: ಮದುವೆಯಲ್ಲಿ ವಧು-ವರರಿಬ್ಬರೂ ವಿಷ ಸೇವಿಸಿದ್ದು, ವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್ಐ) ರಂಜಾನ್ ಖಾನ್, ಕನಾಡಿ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ಸಮಾರಂಭದ ವೇಳೆ ವಧು-ವರನ ನಡುವೆ ಜಗಳ ನಡೆದಿದ್ದು, ವರ ವಿಷ ಸೇವಿಸಿ ಈ ವಿಷಯವನ್ನು ವಧುವಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ವಧು ಸಹ ವಿಷ ಸೇವಿಸಿದ್ದಾಳೆ.

ವಿಷ ಸೇವಿಸಿದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ವಧು ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರನ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ಯುವತಿಯು ಮದುವೆಯಾಗುವಂತೆ ಆತನ ಮೇಲೆ ಒತ್ತಡ ಹೇರುತ್ತಿದ್ದಳು, ವೃತ್ತಿಜೀವನದ ಆಧಾರದ ಮೇಲೆ ಎರಡು ವರ್ಷಗಳ ಕಾಲಾವಕಾಶ ಕೋರಿದಾಗ ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು ಎಂದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.