ಚಿಕ್ಕಮಗಳೂರು: ಗಾಳಿ-ಮಳೆ ಅಬ್ಬರಕ್ಕೆ ಮರ ಬಿದ್ದು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಸಾವು…

105
firstsuddi

ಚಿಕ್ಕಮಗಳೂರು: ಗಾಳಿ-ಮಳೆ ಅಬ್ಬರಕ್ಕೆ ಮರ ಬಿದ್ದು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಿನ್ನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಗ್ರಾಮದ ಬಳಿ ನಡೆದಿದೆ.

ಮೃತರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್ ಸ್ಟೇ ನಡೆಸುತ್ತಿದ್ದ ವೇಣುಗೋಪಾಲ್, ಅಲ್ಲಿಂದ ಬರುವಾಗ ಮರ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಉತ್ತರ ಕರ್ನಾಟಕ ಮೂಲದ ವೇಣುಗೋಪಾಲ್, ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್ ಸ್ಟೇ ನಡೆಸುವ ಜೊತೆಗೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇನ್ನು ಮೂಡಿಗೆರೆಯಿಂದ ಹೋಮ್ ಸ್ಟೇಗೆ ಬೈಕ್‌ನಲ್ಲಿ ಹೋಗುವಾಗ ರಸ್ತೆಯ ಬದಿಯಲ್ಲಿದ್ದ ಬೃಹತ್ ಮರ ಬೈಕ್‌ನ ಮೇಲೆ ಬಿದ್ದಿದೆ. ಭಾರೀ ಮಳೆ-ಗಾಳಿಗೆ ಒಂದರ ಹಿಂದೆ ಒಂದರಂತೆ ಸುಮಾರು 3 ಮರ ಬಿದ್ದ ಪರಿಣಾಮ ವೇಣುಗೋಪಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.