ಚಿಕ್ಕಮಗಳೂರು: ಕರ್ನಾಟಕ ಸಂಗೀತದ ಪಿತಾಮಹ, ಸಂತ ಶ್ರೀ ತ್ಯಾಗರಾಜರು, ದಾಸಶ್ರೇಷ್ಠ ಶ್ರೀ ಪುರಂದರದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ಸ್ವಾಮಿದೇವಾಲಯದಲ್ಲಿ ನಿನ್ನೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಆರಾಧನೆ ಅಂಗವಾಗಿ ಸ್ಥಳೀಯ ಮತ್ತು ಹೊರ ಊರುಗಳ ಸಂಗೀತಗಾರರು, ಶ್ರೀ ತ್ಯಾಗರಾಜರು, ಪುರಂದರದಾಸರು, ಕನಕದಾಸರ ವೇಷಧಾರಿಗಳು ಹಾಗೂ ಭಾವಚಿತ್ರದೊಂದಿಗೆ ಉತ್ಸವ, ಸಂಪ್ರದಾಯ, ಕೃತಿಗಳು ಮತ್ತು ಪಿಳ್ಳಾರಿ ಗೀತೆಗಳನ್ನು ಹಾಡುತ್ತಾ ಗ್ರಾಮದಲ್ಲಿ ಊಂಛವೃತ್ತಿ ನಡೆಸಿದರು.
ಮನೆಗಳ ಮುಂದೆ ಸಾರಿಸಿ, ರಂಗೋಲಿ ಹಾಕಿ ವೇಷಧಾರಿಗಳನ್ನು ಸ್ವಾಗತಿಸಿದ ಗ್ರಾಮಸ್ಥರು ಅವರ ಪಾದಪೂಜೆ ಮಾಡಿ ಪಡಿ ನೀಡಿ ಆರತಿ ಎತ್ತಿ ಬೀಳ್ಕೊಟ್ಟರು.
ನಂತರ ಹಾಸನದ ವಿದ್ವಾನ್ ಬಿ.ಎನ್.ಎಸ್ ಮುರಳಿ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ಸ್ಥಳೀಯ ಮತ್ತು ಹೊರ ಊರುಗಳ ಸಂಗೀತಗಾರರು ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ, ಗಾಯನ ನಡೆಸಿ ಸಂಗೀತ ಸೇವೆ ಸಲ್ಲಿಸಿದರು.
ಇತ್ತೀಚೆಗೆ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರು ಮತ್ತು ಅವರ ಮಕ್ಕಳಿಗೆ ಇದೇ ವೇಳೆ ಸಾಂಸ್ಕೃತಿಕ ಸಂಘದಿಂದ ಪ್ರೋತ್ಸಾಹಧನ ವಿತರಿಸಲಾಯಿತು.
ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ, ಪದಾಧಿಕಾರಿಗಳಾದ ರಣಜಿತ್ ಸಿಂಗ್, ಶಂಕರನಾರಾಯಣ ಭಟ್, ಸುರೇಂದ್ರ ಶೆಟ್ಟಿ, ಅರವಿಂದ ದೀಕ್ಷಿತ್, ಬಿ.ಎನ್. ಸುಬ್ರಹ್ಮಣ್ಯ, ಬೆಳವಾಡಿ ಮಂಜುನಾಥ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.