ಇಂದಿನಿಂದ 2000 ರೂ. ಮುಖಬೆಲೆ ನೋಟು ಬದಲಾವಣೆಗೆ ಅವಕಾಶ…

77
firstsuddi

ನವದೆಹಲಿ: ಚಲಾವಣೆಯಿಂದ ಹಿಂಪಡೆದಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಇಂದಿನಿಂದ ಬ್ಯಾಂಕುಗಳಿಗೆ ನೀಡಿ ಬದಲಾಯಿಸಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಮೇ 23 ರಿಂದ ಸೆಪ್ಟೆಂಬರ್ 30 ರವರೆಗೂ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದ್ದು, ಈ 4 ತಿಂಗಳ ಗಡುವಿನಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದು.

ನೋಟು ಬದಲಾವಣೆಗೆ ಆರ್‌ಬಿಐ ಅರ್ಜಿ ಬಿಡುಗಡೆ ಮಾಡಿದ್ದು,  ಬ್ಯಾಂಕ್‌ನಲ್ಲೇ ಈ ಎಕ್ಸ್‌ಚೇಂಜ್‌ ಅರ್ಜಿ ಸಿಗಲಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಜಿ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ 2000 ರೂ. ಮುಖಬೆಲೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಈ ಅರ್ಜಿಯು ನೋಟು ಬದಲಾವಣೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ತಮ್ಮ ಬಳಿ 2000 ರೂ. ನೋಟುಗಳಿದ್ದರೆ ಆಯಾ ಬ್ಯಾಂಕ್ ಶಾಖೆಗಳಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.

2000 ರೂಪಾಯಿಗೆ ಬದಲಾಗಿ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಲು ಅರ್ಜಿ ಬೇಕಿಲ್ಲ. ಖಾತೆದಾರರು ತಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳಲು ಇದು ಅನ್ವಯಿಸುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್‌ನಲ್ಲಿ 2000 ರೂ. ನೋಟಿನ ವಿವರ ಬರೆದು ಜಮೆ ಮಾಡಿಕೊಳ್ಳಬಹುದಾಗಿದೆ.

ಇನ್ನು 2000 ರೂ. ನೋಟುಗಳನ್ನು ಬದಲಾಯಿಸಲು ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ನೀಡಬೇಕು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಯಾವುದೇ ದಾಖಲೆ ಬೇಡ ಎಂದಿದೆ. ಅಷ್ಟೇ ಅಲ್ಲ ಬ್ಯಾಂಕ್‌ನಲ್ಲಿ ಖಾತೆ ಇಲ್ಲದಿದ್ರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ತಿಳಿಸಿದೆ.

2,000 ರೂಪಾಯಿ ನೋಟುಗಳ ವಿನಿಮಯ ಹಾಗೂ ಠೇವಣಿಗೆ ಯಾವುದೇ ಶುಲ್ಕವನ್ನು ಬ್ಯಾಂಕ್‌ಗಳಿಗೆ ಪಾವತಿಸಬೇಕಿಲ್ಲ. ಬ್ಯಾಂಕ್‌ಗಳು ಉಚಿತವಾಗಿಯೇ ನಿಮ್ಮ ನೋಟುಗಳನ್ನು ಬದಲಿಸಿಕೊಡುತ್ತವೆ.