ಭೋಜ್​ಪುರಿ ಸಿಂಗರ್ ನಿಶಾ ಮೇಲೆ ಗುಂಡಿನ ದಾಳಿ…

58
firstsuddi

ಭೋಜ್​ಪುರಿ ಸಿಂಗರ್ ನಿಶಾ ಉಪಾಧ್ಯಾಯ ಮೇಲೆ ಲೈವ್ ಶೋ ವೇಳೆ ಗುಂಡಿನ ದಾಳಿ ನಡೆದಿದೆ.

ಬಿಹಾರದ ಪಾಟ್ನಾ ಬಳಿ ಖಾಸಗಿ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಗಾಯಕಿ ನಿಶಾ ಉಪಾಧ್ಯಾಯ ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ನಟಿಯ ಎಡಗಾಲಿಗೆ ಗುಂಡು ತಗುಲಿದೆ.

ಗುಂಡಿನ ದಾಳಿಗೆ ಒಳಗಾದ ಗಾಯಕಿಯನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಕಿ ನಿಶಾ ಈಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಮಾಧ್ಯಮಗಳ ಜೊತೆ ಘಟನೆ ಬಗ್ಗೆ ಮಾತನಾಡಿದ್ದಾರೆ. ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿ, ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ಹೇಗೆ ನಡೆದಿದೆ ಮತ್ತು ಗುಂಡಿನ ದಾಳಿಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಾಯಕಿ ನಿಶಾ ಉಪಾಧ್ಯಾಯ, ಬಿಹಾರದ ಸರಾನಾ ಜಿಲ್ಲೆಯ ಗೌರ್ ಬಸಂತ್ ಗ್ರಾಮದವರಾಗಿದ್ದಾರೆ. ಬಿಹಾರದ ಜನಪ್ರಿಯ ಭೋಜ್​ಪುರಿ ಗಾಯಕರಲ್ಲಿ ನಿಶಾ ಸಹ ಒಬ್ಬರಾಗಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ, ಹೋಳಿ ಇನ್ನಿತರೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ. ‘ಲೇ ಲೇ ಆಯೆ ಕೋಕಾ ಕೋಲಾ’, ‘ನವಕರ್ ಮಂತ್ರ’, ‘ಧೋಲಿದಾ ಧೋಲ್ ರೇ ವಾಗಡ್’ ಮತ್ತು ‘ಹಸಿ ಹಸಿ ಜಾನ್ ಮರೇಲಾ’ ಇವರು ಹಾಡಿರುವ ಜನಪ್ರಿಯ ಗೀತೆಗಳಾಗಿದೆ.