ಜಾನಪದ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ಕಡ್ಡಾಯವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ : ಎಚ್.ಡಿ. ತಮ್ಮಯ್ಯ.

92
firstsuddi

ಚಿಕ್ಕಮಗಳೂರು: ನಮ್ಮ ಹಿರಿಯರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಜಾನಪದ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ಕಡ್ಡಾಯವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕ ನಗರದ ಕೋಟೆ ಬಡಾವಣೆಯ ಎಚ್.ಕೆ. ವಿಜಯಲಕ್ಷ್ಮಿ ವಿಶ್ವನಾಥ್ ಅವರ ಮನೆಯಂಗಳದಲ್ಲಿ ನಿನ್ನೆ ಆಯೋಜಿಸಿದ್ದ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಮೂಲ ಬೇರಾದ ಜಾನಪದ, ನಮ್ಮ ಪಾಶ್ಚಾತ್ಯ ಸಂಸ್ಕೃತಿಯ ಮೀತಿ ಮೀರಿದ ವ್ಯಾಮೋಹದಿಂದಾಗಿ ಯಾರಿಗೂ ಬೇಡದ ಸರಕಾಗುತ್ತಿದೆ ಎಂದು ವಿಷಾದಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಅಲ್ಪಸ್ವಲ್ಪವಾದರೂ ಉಳಿದಿದೆ. ಆದರೆ, ನಗರ ಪ್ರದೇಶಗಳಲ್ಲಿ ಸಂಪೂರ್ಣ ಕಣ್ಮರೆಯಾಗುತ್ತಿದೆ ಎಂದ ಅವರು, ನಮ್ಮ ಮಕ್ಕಳಿಗೆ ಈಗಲಾದರೂ ಬಲವಂತವಾಗಿ ಜಾನಪದ ಸಂಸ್ಕೃತಿಯನ್ನು ಕಲಿಸದಿದ್ದಲ್ಲಿ ಮುಂದಿನ ಪೀಳಿಗೆಗೆ ಜನಪದದ ಪರಿಚಯವೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಜಾನಪದ ಪರಿಷತ್ ನಿರ್ಮಿಸಲಿರುವ ಜಾನಪದ ಕಲಾಭವನಕ್ಕೆ ನಗರದಲ್ಲಿ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನಮ್ಮ ಹಿರಿಯರು ಮೈಗೂಡಿಸಿಕೊಂಡಿದ್ದ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವುದರ ಜೊತೆಗೆ ಅದನ್ನು ನಮ್ಮ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು ಎಂದು ಕಿವಿ ಮಾತು ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ನೆಲೆಸುತ್ತದೆ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಜಾನಪದದ ಸೊಗಡನ್ನು ಮುಂದಿನ ತಲೆಮಾರಿಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎಚ್. ಪೂರ್ಣೇಶ್ ಪರಿಷತ್ತಿನಿಂದ ನಿರ್ಮಿಸಲಾಗುವ ಜಾನಪದ ಕಲಾಭವನಕ್ಕೆ ಹಾಗೂ ನಡೆಸಲಾಗುವ ಜಾನಪದ ಸಮ್ಮೇಳನಗಳಿಗೆ ಸಹಕಾರ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಕೆ. ವಿಜಯಲಕ್ಷ್ಮಿವಿಶ್ವನಾಥ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ನೂತನ ಶಾಸಕ ಎಚ್.ಡಿ. ತಮ್ಮಯ್ಯ ಮತ್ತು ಬೆಂಗಳೂರಿನ ಸಮಾಜ ಸೇವಕಿ ಬೃಂದಾಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ನಂತರ ಜಾನಪದ ಗೀತೆಗಳ ಗಾಯನ ನಡೆಯಿತು. ಪರಿಷತ್ತಿನ ಪದಾಧಿಕಾರಿಗಳಾದ ಮಹಾಲಕ್ಷ್ಮಿ, ಶೈಲಜಾ, ನೇತ್ರಾ, ಅಣ್ಣಪ್ಪ ಉಪಸ್ಥಿತರಿದ್ದರು.