ವೀಕೆಂಡ್ ವಿತ್ ರಮೇಶ್- 100ನೇ ಸಾಧಕರ ಸೀಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್.

69
firstsuddi

ವೀಕೆಂಡ್ ವಿತ್ ರಮೇಶ್ ಮೊದಲ ಸೀಸನ್​ನಿಂದ ಐದನೇ ಸೀಸನ್​ವರೆಗೆ ಒಟ್ಟೂ 99 ಸಾಧಕರು ಬಂದು ಹೋಗಿದ್ದಾರೆ. 100ನೇ ಸಾಧಕರಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಮಿಸುತ್ತಿದ್ದಾರೆ.

‘ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ’ ಎಂದು ಕ್ಯಾಪ್ಷನ್ ಬರೆದು ಪ್ರೋಮೋ ಹಂಚಿಕೊಂಡಿದೆ ಜೀ ವಾಹಿನಿ. ಈಗಾಗಲೇ ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋ ಕೂಡ ರಿಲೀಸ್ ಆಗಿದ್ದು, ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ ಎಂದು ಹಾಕಲಾಗಿದೆ. ಸಾಧಕರ ಸೀಟಿನಲ್ಲಿ ಕುಳಿತಿರುವ ಡಿಕೆ ಶಿವಕುಮಾರ್ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ.

ಡಿಕೆ ಶಿವಕುಮಾರ್ ಎಪಿಸೋಡ್​ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೇ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ಡಿಕೆ ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಡಿಕೆಶಿ ಎಪಿಸೋಡ್ ಮೂಲಕ ವೀಕೆಂಡ್ ವಿತ್ ರಮೇಶ್ ಮುಕ್ತಾಯವಾಗಲಿದೆ ಎಂದು ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.