ಮುಂಬೈ: ಮಹಿಳಾ ಹಾಸ್ಟೆಲ್‌ನಲ್ಲಿ 18 ವರ್ಷದ ಯುವತಿಯನ್ನು ಹತ್ಯೆಗೈದ ಬಳಿಕ ರೈಲ್ವೇ ಹಳಿಯಲ್ಲಿ ಆರೋಪಿಯ ಶವ ಪತ್ತೆಯಾಗಿರುವ ಘಟನೆ ದಕ್ಷಿಣ ಮುಂಬೈನ ಚರ್ಚ್ ಗೇಟ್ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ಯುವತಿ ಬಾಂದ್ರಾದ ಉಪನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿಯಾಗಿದ್ದು, ಮೆರೈನ್ ಡ್ರೈವ್‌ನ ಮಹಿಳಾ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಹಾಸ್ಟೆಲ್‌ನ ನಾಲ್ಕನೇ ಅಂತಸ್ತಿನಲ್ಲಿದ್ದ ಆಕೆಯ ಕೊಠಡಿ ಹೊರಗಿನಿಂದ ಬೀಗ ಹಾಕಿದ್ದು, ಮಧ್ಯಾಹ್ನವಾದರೂ ಆಕೆ ಹೊರಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ಒಡೆದು ಕೋಣೆಯೊಳಗೆ ನುಗ್ಗಿದಾಗ ದುಪ್ಪಟ್ಟ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ನಂತರ ಸತ್ಯಾಂಶ ಗೊತ್ತಾಗಲಿದೆ. ಶೀಘ್ರವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಈ ಪ್ರಕರಣದಲ್ಲಿ ಶಂಕಿತ ಎನ್ನಲಾದ ಹಾಸ್ಟೆಲ್ ಭದ್ರತಾ ಸಿಬ್ಬಂದಿಯೊಬ್ಬರು ಬೆಳಿಗ್ಗೆ ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಅದೇ ಹಾಸ್ಟೆಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಕನೋಜಿಯಾ ಎಂದು ಗುರುತಿಸಲಾಗಿದೆ. ಮುಂಬೈನ ಮರೈನ್ ಡ್ರೈವ್ ಪಿಎಸ್, ಆತನ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.










