ಜಬಲ್‍ಪುರ: ಆಂಬುಲೆನ್ಸ್‌ಗೆ ಪಾವತಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬರು ತಮ್ಮ ನವಜಾತ ಮಗುವಿನ ಮೃತ ದೇಹವನ್ನು ಚೀಲದಲ್ಲಿ ಸುತ್ತಿ ಬಸ್ ನಲ್ಲಿ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ.
ಬುಡಕಟ್ಟು ಜನಾಂಗದ ಸುನೀಲ್ ಧುರ್ವೆ ಮತ್ತು ಪತ್ನಿ ಜುಮ್ನಿಬಾಯಿ ಜಬಲ್‍ಪುರದ ವೈದ್ಯಕೀಯ ಕಾಲೇಜಿನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ನವಜಾತ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಹೆಚ್ಚಿನ ಚಿಕಿತ್ಸೆ ಕೊಟ್ಟರೂ ಮಗು ಬದುಕುಳಿಯಲ್ಲಿಲ್ಲ. ಆದರೆ ದಂಪತಿಗಳ ಬಳಿ ಮಗುವಿನ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲು ದುಡ್ಡಿರಲಿಲ್ಲ. ಹೀಗಾಗಿ ನತದೃಷ್ಟ ತಂದೆ, ನವಜಾತ ಶಿಶುವನ್ನು ಚೀಲದಲ್ಲಿಟ್ಟುಕೊಂಡು 150 ಕಿ.ಮೀ ಪ್ರಯಾಣಿಸಿದರು.
ದಿಂಡೋರಿಯ ಗ್ರಾಮಕ್ಕೆ ತಂದೆ ತನ್ನ ಮಗುವಿನ ಶವವನ್ನು ಮನೆಗೆ ಸಾಗಿಸಲು ಆಂಬುಲೆನ್ಸ್ ಅಥವಾ ಶವ ವಾಹನವನ್ನು ವ್ಯವಸ್ಥೆ ಮಾಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಆ ವ್ಯಕ್ತಿಗೆ ಯಾವುದೇ ಸಹಾಯ ಮಾಡಿಲ್ಲ ಎನ್ನಲಾಗಿದೆ. ಖಾಸಗಿ ಆಂಬುಲೆನ್ಸ್ ಬಾಡಿಗೆಗೆ ಪಡೆಯಲು ಸಾಧ್ಯವಾಗದ ಕಾರಣ ದಂಪತಿ ಶಿಶುವಿನ ಮೃತ ದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡ್ಯೊಯಲು ನಿರ್ಧರಿಸಿದರು.
ನವಜಾತ ಶಿಶುವಿನ ಮೃತದೇಹವನ್ನು ವೈದ್ಯಕೀಯ ಕಾಲೇಜಿನಿಂದ ಆಟೋ ರಿಕ್ಷಾದಲ್ಲಿ ಜಬಲ್‍ಪುರ ಬಸ್ ನಿಲ್ದಾಣಕ್ಕೆ ತೆಗೆದುಕೊಂಡು ಬರಲಾಯಿತು. ಆದರೆ ಬಸ್ ಚಾಲಕ ಮೃತದೇಹದೊಂದಿಗೆ ಬಸ್ ಪ್ರವೇಶಿಸಲು ನಿರಾಕರಿಸಿದನು. ಕೊನೆಗೆ ಬಲವಂತದ ಮೇರೆಗೆ ಮೃತದೇಹವನ್ನು ಚೀಲದಲ್ಲಿ ಬಚ್ಚಿಟ್ಟು ಮತ್ತೊಂದು ಬಸ್ಸಿನಲ್ಲಿ 150 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಮತ್ತು ಹೇಗೋ ತಡರಾತ್ರಿ ದಿಂಡೋರಿಗೆ ತಲುಪಿದೆ. ಮಗುವಿನ ಶವವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ತಮ್ಮ ಸಂಬಂಧಿಕರಿಗಾಗಿ ದಿಂಡೋರಿ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದರು, ಆದರೆ ದಿಂಡೋರಿನಲ್ಲೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ.
ಮಗು ಕಳೆದುಕೊಂಡ ನೋವು ತಾಯಿಗೆ ಬಿಕ್ಕಿ-ಬಿಕ್ಕಿ ಅಳುವಂತೆ ಮಾಡಿತ್ತು. ಆದರೆ ತಂದೆ ಮಾತ್ರ ಕಲ್ಲು ಹೃದಯ ಮಾಡಿಕೊಂಡು ಮಗುವಿನ ಮೃತದೇಹ ಇರುವ ಚೀಲ ಹಿಡಿದುಕೊಂಡೇ ಕೂತಿದ್ದ. ಕೊನೆಗೆ ಬಸ್‌ನಿಂದ ಇಳಿಯುವಾಗ ಇದು ಕೆಲವರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯರು ಅಲ್ಲಿ ಜಮಾಯಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.










