ನನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಜನರ ಋಣ ತೀರಿಸುತ್ತೇನೆ: ಎಚ್.ಡಿ. ತಮ್ಮಯ್ಯ.

74
firstsuddi

ಚಿಕ್ಕಮಗಳೂರು: ಜನಸ್ನೇಹಿ ಆಡಳಿತ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಮೂಲಕ ನನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಲೋಟಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ, ನಿನ್ನೆ ನೀಡಿದ ಸನ್ಮಾನ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಾಮಾನ್ಯ ‘ಡಿ’ ದರ್ಜೆ ನೌಕರನ ಮಗನಾದ ನನ್ನನ್ನು ಕ್ಷೇತ್ರದ ಜನತೆ ನಾಲ್ಕು ಬಾರಿ ನಗರಸಭೆ ಸದಸ್ಯನನ್ನಾಗಿ, ಅಧ್ಯಕ್ಷನನ್ನಾಗಿ, ಉಪಾಧ್ಯಕ್ಷನನ್ನಾಗಿ, ಸಿಡಿಎ ಸದಸ್ಯನನ್ನಾಗಿ ಮತ್ತು ಶಾಸಕನನ್ನಾಗಿ ಮಾಡಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ ಅದು ಇರುತ್ತದೆ ಹೋಗುತ್ತದೆ, ಅದರ ನಡುವೆ ಜನರ ಋಣ ತೀರಿಸುವ ನಿಟ್ಟಿನಲ್ಲಿ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡುತ್ತೇನೆ ಎಂದರು.

ವಿಶ್ವಕರ್ಮ ಸಮುದಾಯದವರು ಮತ್ತು ಚಿನ್ನ, ಬೆಳ್ಳಿ ವರ್ತಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟುವಂತೆ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿಯ ರಾಜ್ಯ ನಿರ್ದೇಶಕ ಜಗದೀಶಾಚಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಪೊಲೀಸರು, ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ನೀಡುವ ಕಿರುಕುಳವನ್ನು ನಿಲ್ಲಿಸುವಂತೆ ಪೊಲೀಸರು ಇಲಾಖೆಗೆ ಒಂದು ತಿಂಗಳ ಗಡುವು ನೀಡಲಾಗಿದೆ ಎಂದ ಅವರು, ನಗರಕ್ಕೆ ರೈಲು ಬರುವ ಮತ್ತು ತೆರಳುವ ವೇಳೆಗೆ ರೈಲ್ವೆ ನಿಲ್ದಾಣಕ್ಕೆ ಬಸ್ ಬಿಡುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಸಿಗೆ ಸೂಚಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಜಗದೀಶಾಚಾರ್ ಅವರನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ ಅಧ್ಯಕ್ಷ ಪುರುಷೋತ್ತಮಾಚಾರ್, ವಿಶ್ವಕರ್ಮ ಸಮುದಾಯವನ್ನು ಗುರುತಿಸಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಜಗದೀಶಾಚಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರಿಯಾ ಸಮಿತಿ ನಿರ್ದೇಶಕ ಜಗದೀಶಾಚಾರ್, ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಸಮಾರಂಭದಲ್ಲಿ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.

ಅರ್ಚಕರ ಸಂಘದ ರಾಜ್ಯ ನಿರ್ದೇಶಕ ರತ್ನಾಕರಾಚಾರ್ಯ, ವಿಗ್ರಹ ಶಿಲ್ಪಿ ಜಯಣ್ಣಾಚಾರ್, ಕಾಂಗ್ರೆಸ್ ಮುಖಂಡ ದಯಾನಂದ ನಾಯ್ಡು, ನಿವೃತ್ತ ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್, ಪ್ರಸನ್ನಕುಮಾರ್, ಉಮಾಶಂಕರ್ ಉಪಸ್ಥಿತರಿದ್ದರು.