ದಾಂಪತ್ಯ ಜೀವನದಲ್ಲಿ ಲೈಂಗಿಕತೆ ನಿರಾಕರಿಸಿದರೆ ಅದು ಕೌರ್ಯಕ್ಕೆ ಸಮಾನ – ಕರ್ನಾಟಕ ಹೈ ಕೋರ್ಟ್…

110
firstsuddi

ಬೆಂಗಳೂರು: ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ಪರಸ್ಪರರಿಗೆ ಲೈಂಗಿಕತೆ ನಿರಾಕರಿಸಿದರೆ ಅದು ಕೌರ್ಯಕ್ಕೆ ಸಮಾನ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಆದೇಶಿಸಿದೆ.

ಶಾರೀರಿಕ ಸಂಬಂಧ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಆತನ ಪೋಷಕರ ವಿರುದ್ಧ ಪತ್ನಿ ಸಲ್ಲಿಸಿದ್ದ ಕ್ರಿಮಿನಲ್ ಮೊಕ್ಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಹಿಂದೂ ವಿವಾಹ ಕಾಯ್ದೆ 1995ರ ಪ್ರಕಾರ, ಪತಿಯಿಂದ ದೈಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ಆದರೆ ಐಪಿಸಿ ಸೆಕ್ಷನ್ 489ಎ ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ ಮತ್ತು ಇದು ಅಪರಾಧವೂ ಅಲ್ಲ ಎಂದು ಪೀಠವು ಗಮನಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪತ್ನಿ ದಾಖಲಿಸಿದ್ದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ವಿರುದ್ಧ ಇರುವ ಒಂದೇ ಒಂದು ಆರೋಪವೆಂದರೆ, ಆತ ಓರ್ವ ಧಾರ್ಮಿಕ ಗುರುವಿನ ಅನುಯಾಯಿಯಾಗಿದ್ದು, ಆತ ಹೇಳಿದಂತೆ ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ, ಅದು ಆತ್ಮಗಳ ಸಮ್ಮಿಲನ ಎಂದು ಹೇಳಿ ಪತ್ನಿಯ ಜೊತೆ ದೈಹಿಕ ಸಂಬಂಧ ನಡೆಸಲು ಆತ ನಿರಾಕರಿಸಿರುವುದು.

ಈತನ ಅರ್ಜಿಯ ವಿಚಾರಣೆ ನಡೆಸುವ ವೇಳೆ ಈ ವಿಚಾರವನ್ನು ಗಮನಿಸಿದ ನ್ಯಾಯಾಧೀಶರಾದ ನಾಗರತ್ನ ಅವರು, ಆತ ಪತ್ನಿ ಜೊತೆ ದೈಹಿಕ ಸಂಬಂಧವನ್ನು ಹೊಂದುವ ಬಗ್ಗೆ ಎಂದು ಯೋಚಿಸಿಯೇ ಇಲ್ಲ ಎಂಬುದನ್ನು ಗಮನಿಸಿದರು. ಇದು ನಿಶಂಸಯಾಸ್ಪದವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿ ಪರಸ್ಪರರ ಆಸೆಗಳನ್ನು ಪೂರೈಸದ ಕಾರಣ ಕ್ರೌರ್ಯವಾಗುತ್ತದೆ. ಆದರೆ ಇದು ಭಾರತೀಯ ದಂಡ ಸಂಹಿತೆಯ 498(ಎ) ಅಡಿ ಉಲ್ಲೇಖಿಸಿದ ಕ್ರೌರ್ಯದಡಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ.

2019ರ ಡಿಸೆಂಬರ್ 18 ರಂದು ಈ ಜೋಡಿ ವಿವಾಹವಾಗಿತ್ತು. ಪತ್ನಿ ತನ್ನ ಪತಿಯ ಮನೆಯಲ್ಲಿ ಕೇವಲ 28 ದಿನಗಳಷ್ಟೇ ವಾಸವಿದ್ದಳು. ಇದಾದ ನಂತರ 2022ರ ಫೆಬ್ರವರಿ 5 ರಂದು ಪತ್ನಿ ಐಪಿಸಿ ಸೆಕ್ಷನ್ 498ರ ಅಡಿ ಹಾಗೂ ವರದಕ್ಷಿಣೆ ಕಾಯ್ದೆಯಡಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಕೇಸ್ ದಾಖಲಿಸಿದ್ದಳು. ಇದರ ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸಿದ್ದಳು.

2022ರ ನವೆಂಬರ್ ನಲ್ಲಿ ಮದುವೆಯನ್ನು ರದ್ದುಗೊಳಿಸಲು ಕೋರಿ, ನವೆಂಬರ್ 16, 2022 ರಂದು ಮದುವೆ ರದ್ದುಗೊಳಿಸಿದಾಗ ಪತ್ನಿ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗುವುದಿಲ್ಲ ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.