ಮಂಗಳೂರು: ಬಸ್ಸಿನಲ್ಲಿ ವಿವಾಹಿತ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದ ಸಹ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಮ್ಮಿಂಜೆ ಗ್ರಾಮದ ಸುಬ್ರಹ್ಮಣ್ಯ ಭಟ್ ಅನುಚಿತವಾಗಿ ವರ್ತಿಸಿದ ಆರೋಪಿ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಕನ್ಯಾದ ಕುಕ್ಕಾಜೆ ನಿವಾಸಿ ದೂರು ನೀಡಿರುವ ಮಹಿಳೆ. ಉಪ್ಪಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ವ್ಯಕ್ತಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ತನ್ನ ತಾಯಿಯೊಂದಿಗೆ ಉಪ್ಪಳದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪುತ್ತೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸೀಟಿನ ಮಧ್ಯದಲ್ಲಿ ಕೈ ಹಾಕಿ ಹಿಂಬದಿಯಿಂದ ಹಿಡಿದು ಅಶ್ಲೀಲವಾಗಿ ವರ್ತಿಸಿದ್ದಾನೆ. ಮಹಿಳೆ ಪ್ರಶ್ನಿಸಿದ್ದಕ್ಕೆ ಸುಬ್ರಹ್ಮಣ್ಯ ಭಟ್ ಬೊಳುವಾರಿನಲ್ಲಿ ಬಸ್ನಿಂದ ಇಳಿದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೂಲಕ ಬಿಡುಗಡೆಗೊಳಿಸಿದೆ.










