ಯುವಜನತೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಬೇಕು: ಭಾಗ್ಯ.

83
firstsuddi

ಚಿಕ್ಕಮಗಳೂರು: ಯುವಜನತೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯ ಸಲಹೆ ಮಾಡಿದರು.

ನಗರದ ಶ್ರೀ ಶಕ್ತಿ ಮದ್ಯವ್ಯಸನ ಮುಕ್ತಿ ಕೇಂದ್ರದಲ್ಲಿ ನಿನ್ನೆ ಏರ್ಪಡಿಸಿದ್ದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ತಂಬಾಕು, ಮದ್ಯ, ಮಾದಕ ವಸ್ತುಗಳು ಸೇರಿದಂತೆ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳು ಆರಂಭದಲ್ಲಿ ಬಹಳ ಅಪ್ಯಾಯಮಾನವಾಗಿರುತ್ತವೆ. ಮೈ ಮನಸ್ಸಿಗೆ ಮುದ ನೀಡುತ್ತವೆ. ಅವುಗಳಿಗೆ ಮನಸೋತು ನಾವು ಅವುಗಳ ದಾಸರಾದರೆ ನಮ್ಮ ಉಜ್ವಲ ಭವಿಷ್ಯ ಮಣ್ಣು ಪಾಲಾಗುತ್ತದೆ ಎಂದು ಎಚ್ಚರಿಸಿದರು.

ಮಾದಕ ವಸ್ತುಗಳ ವ್ಯಸನಿಗಳಾದರೆ ಕುಟುಂಬದ ಮಾನ, ಮರ್ಯಾದೆ, ಹಣ ಎಲ್ಲವನ್ನೂ ಕಳೆದುಕೊಂಡು ಭಿಕ್ಷೆ ಬೇಡುವ ಅಥವಾ ಅಪರಾಧಿಗಳಾಗುವ ದುಸ್ಥಿತಿ ಬರುತ್ತದೆ ಎಂದು ಹೇಳಿದರು.

ನಗರಠಾಣಾಧಿಕಾರಿ ಜಯರಾಮ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಮಾದಕ ವಸ್ತುಗಳ ಸಾಗಾಟ ಅಥವಾ ಮಾರಾಟಕ್ಕೆ ನೀಡಲಾಗುವ ಶಿಕ್ಷೆಗಳು ಹಾಗೂ ಕಾನೂನಿನ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ಮದ್ಯವ್ಯಸನ ಮುಕ್ತಿ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನ್ನಪೂರ್ಣ ವೃದ್ಧಾಶ್ರಮದ ವ್ಯವಸ್ಥಾಪಕ ಶಿವನಗೌಡ, ಮಂಜುನಾಥ್, ವ್ಯಸನ ಮುಕ್ತಿ ಕೇಂದ್ರದ ಸಿಬ್ಬಂದಿಗಳಾದ ಹರೀಶ್, ಲಂಕೇಶ್, ಸೌರಭ ಉಪಸ್ಥಿತರಿದ್ದರು.