ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮಕ್ಕೆ ತೆರಳಲು ಮೆಟ್ರೊದಲ್ಲಿ ಪ್ರಯಾಣ ನಡೆಸಿದರು.
ಮೋದಿ ಈ ಹಿಂದೆ ರಸ್ತೆ ಮೂಲಕ ದೆಹಲಿ ವಿಶ್ವವಿದ್ಯಾಲಯಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಈ ಯೋಜನೆಯನ್ನು ಬದಲಾಯಿಸಿಕೊಂಡಿದ್ದಾರೆ. ಮೋದಿ ಕಾರ್ಡ್ ಸ್ವೈಪ್ ಮಾಡುವ ಮೂಲಕ ಮೆಟ್ರೊ ಪ್ರವೇಶಿಸಿದ ನಂತರ ರೈಲಿನಲ್ಲಿ ಕುಳಿತು ಪ್ರಯಾಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಮೆಟ್ರೊದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೆಟ್ರೊಗಾಗಿ ಕಾದು ನಿಂತ ಪ್ರಧಾನಿ ಸ್ವತಃ ತಾವೇ ಟೋಕನ್ ಖರೀದಿಸಿ ಪ್ರಯಾಣ ಬೆಳೆಸಿದರು. ಏಕಾಏಕಿ ಪ್ರಧಾನಿ ಮೋದಿ ಮೆಟ್ರೊ ಪ್ರಯಾಣಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು ಕಂಡಿತು. ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಿ ಮೋದಿ ಮೆಟ್ರೊ ಏರಿದ್ದರು. ಪ್ರಧಾನಿ ನರೇಂದ್ರ ಮೋದಿ ನಿವಾಸ ಸ್ಥಳದಲ್ಲೇ ಲೋಕ ಕಲ್ಯಾಣ ಮೆಟ್ರೊ ಮಾರ್ಗವಿದೆ. ಅಲ್ಲಿಂದಲೇ ಅವರು ದೆಹಲಿ ವಿವಿಗೆ ಪ್ರಯಾಣ ಬೆಳೆಸಿದರು.
ಇಂದು ಪ್ರಧಾನಿ ಮೋದಿ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮೂರು ಕಟ್ಟಡಗಳ ಶಂಕುಸ್ಥಾಪನೆ ಮತ್ತು ಕಾಫಿ ಟೇಬಲ್ ಪುಸ್ತಕಗಳ ಸೆಟ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಸಮಾರಂಭಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.










