ರಾಯಚೂರು: ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ದನು ಕಾವಲು ಕಾಯ್ತಿದ್ದ ವ್ಯಕ್ತಿಗೆ ಚಾಕು ಇರಿದ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.
ಗಾಯಗೊಂಡವನನ್ನು ರಫಿ ಎಂದು ಗುರುತಿಸಲಾಗಿದ್ದು, ಈತನಿಗೆ ಅಬ್ದುಲ್ ರೌಫ್ ಚಾಕು ಇರಿದಿದ್ದಾನೆ.
ಮಾರುಕಟ್ಟೆಯಲ್ಲಿ ಟೊಮೆಟೋ, ಮೆಣಸಿನಕಾಯಿ ಬೆಲೆ ಗಗನಕ್ಕೇರಿರುವುದರಿಂದ ತರಕಾರಿ ಕಾಯಲು ರಫಿ ತಳ್ಳುವ ಬಂಡಿಯಲ್ಲೇ ಮಲಗಿದ್ದ. ಈ ವೇಳೆ ಅಲ್ಲಿಗೆ ಬೀಡಿ ಕೇಳುವ ನೆಪದಲ್ಲಿ ಬಂದ ಅಬ್ದುಲ್ ರೌಫ್ ಮಲಗಿದ್ದ ರಫಿಯನ್ನು ಎಬ್ಬಿಸಿದ್ದಾನೆ. ಬೀಡಿ ಕೊಡದ ಹಿನ್ನೆಲೆ ಮೊಬೈಲ್ ಕೇಳಿದ್ದಾನೆ, ಮೊಬೈಲ್ ಸಹ ಕೊಡದ ಹಿನ್ನೆಲೆ ಮದ್ಯಪಾನದ ಅಮಲಿನಲ್ಲಿ ಕುತ್ತಿಗೆ ಭಾಗಕ್ಕೆ ಚಾಕು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಾಳು ರಫಿಗೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾನೆ. ಚಾಕು ಇರಿತದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










