ಚಿಕ್ಕಮಗಳೂರು: ರಸ್ತೆ ಇಲ್ಲದೇ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು…

42
firstsuddi

ಚಿಕ್ಕಮಗಳೂರು: ವಾಹನಗಳು ಓಡಾಡಲು ರಸ್ತೆಗಳಿಲ್ಲದ ಕಾರಣ ವಯೋವೃದ್ದೆಯನ್ನು ಗ್ರಾಮಸ್ಥರು ಜೋಳಿಗೆಯಲ್ಲೇ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ನಡೆದಿದೆ.

ಕಲ್ಕೋಡು ಗ್ರಾಮದ ಶೇಷಮ್ಮ (70) ಎಂಬುವವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ವಾಹನ ವ್ಯವಸ್ಥೆ ಇಲ್ಲದೆ ಅವರ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡೇ ಕಾಡಿನ ದಾರಿಯಲ್ಲಿ ಮೈಲಿಗಟ್ಟಲೆ ಹೊತ್ತು ಕೊಂಡು ಸಾಗಿ ಕಳಸ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳಸ ತಾಲೂಕಿನ ಕಲ್ಕೋಡು, ಈಚಲುಹೊಳೆ ಎಂಬಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಇವರಿಗೆ ಸಂಚಾರಕ್ಕೆ ಯೋಗ್ಯವಾದ ರಸ್ತೆಮಾರ್ಗವೇ ಇಲ್ಲ. ಗ್ರಾಮಸ್ಥರು ತಮ್ಮ ಸಮಸ್ಯೆ ಪರಿಹಾರಕ್ಕೆ ಹಿಂದೆ ಹತ್ತಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕಿವಿಗೊಡದ ಜಿಲ್ಲಾಡಳಿತ, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.