ಪ್ರಿಯಕರನ ಜೊತೆ ಪತ್ನಿ ವಾಸ- ಸಹಿಸದ ಪತಿ, ಕೊಂದೇ ಬಿಟ್ಟ!

62
firstsuddi

ಬೆಂಗಳೂರು ಗ್ರಾಮಾಂತರ: ಪತಿಯನ್ನು ಬಿಟ್ಟು ಮಗುವಿನೊಂದಿಗೆ ಪ್ರಿಯಕರನ ಜೊತೆ ವಾಸವಾಗಿದ್ದ ಪತ್ನಿಯನ್ನು ಆಕೆಯ ಪತಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭಾರತಿ (27) ಕೊಲೆಯಾದ ಗೃಹಿಣಿ. ಈಕೆಯ ಪತಿ ಹರೀಶ್ ಕೊಲೆ ಮಾಡಿದಾತ. ಮೃತ ಭಾರತಿ ಮೂಲತಃ ಮಧುಗಿರಿ ತಾಲೂಕಿನ ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದವಳಾಗಿದ್ದು, ಪತಿ ಹರೀಶ್‍ನ ತ್ಯಜಿಸಿ ಮಗುವಿನೊಂದಿಗೆ ಅದೇ ಗ್ರಾಮದ ಗಂಗರಾಜನೆಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ಕೆಲ ದಿನಗಳಿಂದ ಭಾರತಿ ಅಕ್ರಮವಾಗಿ ಸಂಸಾರ ನಡೆಸುತ್ತಿದ್ದಳು.

ಈ ವಿಚಾರ ತಿಳಿದುಕೊಂಡ ಗಂಡ ಹರೀಶ್ ಹುಡುಕಿಕೊಂಡು ಬಂದಿದ್ದಾನೆ. ಈ ವೇಳೆ ಹರೀಶ್ ಮತ್ತು ಭಾರತಿಯ ನಡುವೆ ಜಗಳ ನಡೆದಿದ್ದು, ಕೋಪ ತಾರಕಕ್ಕೇರಿ ಹರೀಶ್, ಭಾರತಿಯನ್ನು ಕೊಂದು ಮಗುವನ್ನು ಎತ್ತಿಕೊಂಡು ಚಿಕ್ಕದಾಳವಟ್ಟ ಗ್ರಾಮಕ್ಕೆ ಹಿಂದಿರುಗಿದ್ದಾನೆ.

ಸದ್ಯ ಗಂಡ ಹರೀಶ್ ಹಾಗೂ ಪ್ರಿಯಕರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.