ಚಾಮರಾಜನಗರ: ಇತ್ತೀಚೆಗೆ ಜಿಲ್ಲೆಯ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಸುಶೀಲ ಮೇಲೆ ಚಿರತೆ ದಾಳಿ ನಡೆಸಿತ್ತು. ಚಿರತೆ ದಾಳಿಯಿಂದ ಬಾಲಕಿಯ ದವಡೆ ಮೂಳೆ ಮುರಿದಿದ್ದ ಪರಿಣಾಮ ಮುಖ ಊದಿಕೊಂಡಿದ್ದು, ಕಳೆದ 14 ದಿನಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 11ರಂದು ಆಪರೇಷನ್ ಕೂಡ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಇನ್ನು, ಚಿರತೆ ದಾಳಿ ಪ್ರಕರಣ ನಡೆದು ಸುಮಾರು 14 ದಿನಗಳು ಕಳೆದಿದೆ. ಚಿರತೆ ಸೆರೆಗಾಗಿ ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಮೂರು ಬೋನ್‌ಗಳನ್ನು ಸಹ ಇಡಲಾಗಿತ್ತು. ಆದರೆ ಇದುವರೆಗೂ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










