ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ…

33
firstsuddi

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯೋಜನೆಯ ಲಾಂಛನ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.

ನೋಂದಣಿ ಪ್ರಕ್ರಿಯೆ ಹೇಗೆ? ಗೃಹಲಕ್ಷ್ಮಿ ನೋಂದಣಿಗೆ ಯಾರು ಪರದಾಡಬೇಕಿಲ್ಲ. ಯಜಮಾನಿಗೆ ಎಸ್ಎಂಎಸ್ ಮೂಲಕ ದಿನಾಂಕ, ಸಮಯ, ನೋಂದಣಿ ಸ್ಥಳದ ಮಾಹಿತಿ ಕಳುಹಿಸಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ನೀಡಬೇಕಾಗುತ್ತದೆ. ನಿಗದಿತ ದಿನ ನೋಂದಣಿ ಸಾಧ್ಯವಾಗದಿದ್ದಲ್ಲಿ ಯಾವುದೇ ದಿನ ಸಂಜೆ ನೋಂದಣಿ ಮಾಡಿಸಬಹುದು. ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸಂಪೂರ್ಣ ಉಚಿತ. ಸಮಸ್ಯೆಗಳಿದ್ದಲ್ಲಿ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್ ಮಾಡಿ ಮಾಹಿತಿ ಪಡೆಯಬಹುದು.

ಯೋಜನೆಯಡಿ ಆ.15ಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗಲಿದೆ. ರೇಷನ್ ಕಾರ್ಡ್​ನಲ್ಲಿ ಮನೆಯ ಯಜಮಾನಿಯಾಗಿರುವವರು ಯೋಜನೆಯ ಫಲಾನುಭವಿಯಾಗಲಿದ್ದಾರೆ. ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಅವರ ಪತಿಯ ಆಧಾರ್ ಕಾರ್ಡ್ ನೀಡಬೇಕು. ಜಿಎಸ್​ಟಿ ಹಾಗೂ ಆದಾಯ ತೆರಿಗೆ ಪಾವತಿದಾರರ ಪತ್ನಿಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಇದೆ. ಸರ್ಕಾರ ನೇಮಕ ಮಾಡಿರುವ ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದು ನೋಂದಣಿ ಮಾಡಲಿದ್ದಾರೆ.