ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಮದ್ಯದ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಮದ್ಯ ಮಾರಾಟವಾಗಲಿದೆ.
ಸರ್ಕಾರಿ ಆದೇಶದ ಪ್ರಕಾರ ನಿನ್ನೆ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬಂದಿದೆ. ಆದರೆ, ರಾಜ್ಯದ ಕೆಲ ಜಿಲ್ಲೆಗಳ ರಿಟೇಲ್ ಮದ್ಯ ಮಾರಾಟದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ನಿನ್ನೆ ರಾತ್ರಿಯೇ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ.
ಸರ್ಕಾರ ಬಜೆಟ್‌ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟು ಏರಿಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದ್ದನ್ನು ತಿಳಿಸಿತ್ತು.
ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಲಿದೆ. ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ಶೇ.10ರಷ್ಟು ಹೆಚ್ಚಳವಾಗಲಿದೆ.










