ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಬೀದಿಯಲ್ಲಿ ಬಡಿದಾಡಿಕೊಂಡ ಸದಸ್ಯರು…

61
firstsuddi

ಹಾಸನ: ಹಳೇಬಿಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ಬೆಂಬಲಿತ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹಳೇಬಿಡು ಗ್ರಾಮದ ಹೊಯ್ಸಳ ವೃತ್ತದಲ್ಲಿ ನಡೆದಿದೆ.

ಜನಪ್ರತಿನಿಧಿಗಳು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡು ಪ್ರಜ್ಞಾಹೀನನಾಗಿ ಓರ್ವ ಸದಸ್ಯ ಕೆಳಗೆ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಗದಿಯಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆದಿತ್ತು. ಅಧ್ಯಕ್ಷರು ಆಯ್ಕೆಯಾದ ಬಳಿಕ ವಿಜಯೋತ್ಸವದ ವೇಳೆ ಗಲಾಟೆ ನಡೆದಿದೆ. ಗೆದ್ದ ಹಾಗೂ ಪರಾಜಿತ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಪರ-ವಿರೋಧ ಸಂಬಂಧ ಎರಡು ಪಕ್ಷಗಳ ಬೆಂಬಲಿಗರಿಂದ ಹಳೇಬಿಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಳೇಬಿಡು ಗ್ರಾಪಂ ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮೂವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 20 ಸದಸ್ಯರ ಸಂಖ್ಯಾಬಲ ಹೊಂದಿರುವ ಪಂಚಾಯತಿಯಲ್ಲಿ ವಿಜೇತ ಅಭ್ಯರ್ಥಿಯ ಪರವಾಗಿ 11 ಮತ ಹಾಗೂ ಪರಾಜಿತ ಅಭ್ಯರ್ಥಿಯ ಪರವಾಗಿ 9 ಮತಗಳ ಚಲಾವಣೆಯಾಗಿವೆ. ನೂತನ ಅಧ್ಯಕ್ಷರಾಗಿ ನಿತ್ಯಾನಂದ ಹಾಗೂ ಕಾಂತಾಮಣಿ ಉಪಾಧ್ಯಕ್ಷರಾಗಿ ಹೆಸರು ಘೋಷಣೆಯಾಗಿದೆ. ಗೆದ್ದ ಸಂಭ್ರಮದಲ್ಲಿ ವಿಜಯೋತ್ಸವ ಆಚರಿಸಿತ್ತು. ಈ ವೇಳೆ ಗೆದ್ದ ಹಾಗೂ ಪರಾಜಿತ ಗುಂಪುಗಳ ನಡುವೆ ಜಗಳ. ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಮಾರಾಮಾರಿ ನಡೆದಿದೆ.