ಚಿಕ್ಕಮಗಳೂರಿನ ಸುಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ…

66
firstsuddi

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆ ಪ್ರವಾಸಿ ತಾಣಗಳಲ್ಲಿ ಬೆಟ್ಟಗುಡ್ಡಗಳು ಕುಸಿಯೋದು, ಮರಗಳು ಮುರಿದು ಬೀಳೋದು ಇನ್ನೂ ನಿಂತಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಪ್ರವಾಸಿಗರ ಹಿತದೃಷ್ಠಿಯಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಎತ್ತಿನಭುಜ ಪ್ರವಾಸಿ ತಾಣಕ್ಕೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಟ್ರಕ್ಕಿಂಗ್ ತೆರಳಲು ಉತ್ತಮವಾದ ತಾಣವಾಗಿದೆ. ಆದರೆ ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದ 15 ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಬೆಟ್ಟ-ಗುಡ್ಡಗಳು ಕುಸಿಯುತ್ತಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಕೆಲ ಹುಚ್ಚು ಪ್ರವಾಸಿಗರು ವಿಭಿನ್ನ ಭಂಗಿಯಲ್ಲಿ ಫೋಟೋ ತೆಗೆಯಲು ಹೋದಾಗ ಅಪಾಯಗಳು ಸಂಭವಿಸುವ ಸಾಧ್ಯತೆಯೂ ಇದೆ.

ಒಂದು ವೇಳೆ ಅಪಾಯ ಸಂಭವಿಸಿದರೆ ತುರ್ತಾಗಿ ಸಹಾಯಕ್ಕೆ ಘಟನಾ ಸ್ಥಳಕ್ಕೆ ಹೋಗುವುದು ಕೂಡ ಕಷ್ಟ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯವನ್ನು ತಡೆಗಟ್ಟುವ ದೃಷ್ಟಿಯಿಂದ ಎತ್ತಿನಭುಜಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.