ಮಡಿಕೇರಿ: ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ದಕ್ಷಿಣ ಕೊಡಗಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಎಂಬಲ್ಲಿ ನಡೆದಿದೆ.
ಮರಗೋಡು ಗ್ರಾಮದ ನಿವಾಸಿ ಸಿ.ಬಿ.ದೇವಪ್ಪ (58) ಮೃತಪಟ್ಟ ರೈತರಾಗಿದ್ದಾರೆ. ಅರೆಕಾಡು ನೇತಾಜಿ ನಗರದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ ಸಾರ್ವಜನಿಕರನ್ನು ಅಟ್ಟಾಡಿಸಿದೆ. ಕಾಡಾನೆ ಬಂದಿದ್ದರಿಂದ ಭಯಗೊಂಡ ಕಾರ್ಮಿಕರು ಓಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಆನೆ ಗೀಳಿಡುತ್ತಾ ಜನರಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಹೀಗೆ ಆನೆ ಅಡ್ಡಾಡುತ್ತಿದ್ದ ರಸ್ತೆಯಲ್ಲಿ ದೇವಪ್ಪ ಅರೆಕಾಡು ನಿವಾಸಿ ತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಆನೆ ಅವರನ್ನು ಟ್ರ್ಯಾಕ್ಟರ್‌ನಿಂದ ಹೊರಕ್ಕೆ ಎಸೆದು, ತುಳಿದು ಸಾಯಿಸಿದೆ.
ಸ್ಥಳಕ್ಕೆ ವಿರಾಜಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.










