ಚಿಕ್ಕಮಗಳೂರು: ಜಗತ್ತಿನಲ್ಲೇ ಅತ್ಯಂತ ಸಮೃದ್ದವಾದ ಕಲೆ ಯಕ್ಷಗಾನ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ನಿನ್ನೆ ನಡೆದ ಶಿವದೂತ ಪಂಜುರ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಕ್ಷಗಾನಕ್ಕೆ ನಿರ್ದೇಶಕರಿಲ್ಲ, ಅತ್ಯಂತ ಸೊಗಸಾದ ವೇಷಭೂಷಣವಿದೆ. ಗಾಯನವಿದೆ, ಸಂಗೀತವಿದೆ, ಯಕ್ಷಗಾನದಲ್ಲಿ ಎಲ್ಲವೂ ಇದೆ. ಇಡೀ ಪ್ರಪಂಚದಲ್ಲಿ ಯಾವ್ಯಾವ ಕಲೆಗಳಿವೆಯೋ ಆ ಕಲೆಗಳ ಸಾರವೆಲ್ಲ ನೋಡಲು ಸಿಗುವುದು ಯಕ್ಷಗಾನದಲ್ಲಿ ಮಾತ್ರ ಎಂದರು.
ಯಕ್ಷಗಾನದಲ್ಲಿರುವ ಯಾವುದೇ ಕಲೆಗಳನ್ನು ಬೇರೆ ಯಾವುದೇ ಕಲೆಗಳಲ್ಲೂ ನೋಡಲು ಸಾಧ್ಯವಿಲ್ಲ ಎಂದ ಅವರು, ಮೊಗವೀರ ಮಹಾಜನ ಸಂಘ ಪ್ರತಿವರ್ಷ ಯಕ್ಷಗಾನವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸಿದ ಮೊಗವೀರ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಮೊಗವೀರ ಮಹಾಜನ ಸಂಘದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಎಚ್.ಡಿ.ತಮ್ಮಯ್ಯ, ಸಮುದಾಯದ ಹಿರಿಯ ಅಣ್ಣಪ್ಪ ಸುವರ್ಣ, ಯಕ್ಷಗಾನ ಕಲಾವಿದ ದಿನಕರ ಕುಂದರ ನಡೂರ್ ಅವರನ್ನು ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊಗವೀರ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಈ ವೇಳೆ ನಡೆದ ಶಿವದೂತ ಪಂಜುರ್ಲಿ ಯಕ್ಷಗಾನ ನೋಡುಗರ ಗಮನ ಸೆಳೆಯಿತು. ಭಾಗವತರ ಕಂಚಿನಕಂಠದ ಗಾಯನ, ಕಲಾವಿದರ ಚುರುಕು ಸಂಭಾಷಣೆ, ನೃತ್ಯ, ಪ್ರಾಸಬದ್ಧಮಾತು, ನವಿರು ಹಾಸ್ಯ ಸಭಿಕರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಬಿ.ನಾರಾಯಣ್, ಉಪಾಧ್ಯಕ್ಷರಾದ ಎಸ್.ಸುರೇಶ್, ಎಸ್.ನಾರಾಯಣ್, ಪ್ರಧಾನ ಕಾರ್ಯದರ್ಶಿ ಗಣೇಶ್, ಸಹ ಕಾರ್ಯದರ್ಶಿ ಕೆ.ವಿ.ಸುನೀಲ್ ಕುಮಾರ್, ಕೆ.ಪ್ರಮೋದ್, ಗೌರವಾಧ್ಯಕ್ಷ ಡಿ.ಎಲ್.ಶಂಕರ್‍ನಾಥ್, ಮಾಜಿ ಅಧ್ಯಕ್ಷ ಕೆ.ರಾಮಣ್ಣ, ಖಜಾಂಚಿ ಎಚ್.ಎಸ್.ಸತೀಶ್, ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.










