ದನ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆ…

124
firstsuddi

ಗದಗ: ಜಿಲ್ಲೆಯ ರಹಮತ್ ಬಡಾವಣೆ ಬಳಿಯ ಹೊಂಡದಲ್ಲಿ ದನ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆಯಾಗಿದೆ.

ಮೃತರನ್ನು 12 ವರ್ಷದ ಮೊಹಮ್ಮದ್ ಅಮನ್ ಮತ್ತು 14 ವರ್ಷದ ಸಂತೋಷ್ ಕುಂಬಾರ್ ಎಂದು ಗುರುತಿಸಲಾಗಿದೆ. ಇನ್ನು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಮಧ್ಯಾಹ್ನದ ವೇಳೆ ಆಕಳು ಮತ್ತು ಕರುವಿಗೆ ಸ್ನಾನ ಮಾಡಿಸಲು ಮಹಿಳೆ ಶಾಹಿನ್ ಸೇರಿ ನಾಲ್ವರು ತೆರಳಿದ್ದರು. ಈ ವೇಳೆ ಶಾಹಿನ್ ಮಗನ ಮೇಲೆ ಆಕಳು ಎರಗಿದೆ. ಇದರಿಂದ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಶಾಹಿನ್, ಮಗನ ರಕ್ಷಣೆಗೆ ಧಾವಿಸಿದ್ದಳು. ಈಕೆಯೊಂದಿಗೆ ಸಂತೋಷ್ ಕುಂಬಾರ್, ಮೊಹಮ್ಮದ್ ಅಮನ್ ಹುಬ್ಬಳ್ಳಿ ಕೂಡ ಹೊಂಡಕ್ಕೆ ಹಾರಿದ್ದರು. ಇವರ್ಯಾರಿಗೂ ಈಜು ಬಾರದ ಹಿನ್ನಲೆ ನಾಲ್ವರೂ ನೀರಿನಲ್ಲಿ ಮುಳುಗಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮಹಿಳೆ ಶಾಹಿನ್ ಹಾಗೂ ಆಕೆಯ ಮಗ ಮೊಹಮ್ಮದ್ ಆದಿಲ್​ನನ್ನು ಬಚಾವ್ ಮಾಡಿದ್ದರು. ಇನ್ನು ನಾಪತ್ತೆಯಾಗಿದ್ದ ಇಬ್ಬರು ಬಾಲಕರಿಗಾಗಿ ನಿನ್ನೆಯಿಂದ ಶೋಧ ಕಾರ್ಯ ನಡೆದಿತ್ತು. ಇದೀಗ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.