ಚಿಕ್ಕಮಗಳೂರು: ಯುವಜನತೆ ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಆಕರ್ಷಣೆಗಳಿಗೂ ಒಳಗಾಗದೆ, ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಎಂ.ಇ.ಎಸ್. ಸ್ನಾತಕೋತ್ತರ ವಿಭಾಗದಿಂದ ನಿನ್ನೆ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆತ್ತವರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಆಸೆಯಿಂದ ತಾವು ಎಷ್ಟೇ ಬಡತನದಲ್ಲಿ ಇದ್ದರೂ ಸಾಲಸೋಲ ಮಾಡಿ, ಹೊಟ್ಟೆ ಬಟ್ಟೆ ಕಟ್ಟಿ, ಕಷ್ಟಪಟ್ಟು ಒಳ್ಳೆಯ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಓದಿಸುತ್ತಾರೆ. ಯುವಜನತೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಮೋಜು, ಮಸ್ತಿ ಮಾಡದೆ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡುವ ಮೂಲಕ ಹೆತ್ತವರ ಕನಸನ್ನು ನನಸಾಗಿಸಬೇಕು ಎಂದು ಕಿವಿ ಮಾತು ಹೇಳಿದರು.
ಮಲೆನಾಡ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳನ್ನು ಸರ್ಕಾರದ ಅನುದಾನಕ್ಕೊಳಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯೆ ಹಸೀನಾ ಬಾನು, ಕಾಲೇಜು ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಖ.ಎಲ್. ವಿಜಯಕುಮಾರ್, ಬಡಮಕ್ಕಳ ಹಿತದೃಷ್ಟಿಯಿಂದ ಕಡಿಮೆ ಶುಲ್ಕ ಪಡೆಯುವುದರಿಂದಾಗಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಹಾಗಾಗಿ ಸಂಸ್ಥೆಯ ಶಾಲಾ ಕಾಲೇಜುಗಳನ್ನು ಸರ್ಕಾರದ ಅನುದಾನಕೊಳಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಕುವೆಂಪು ವಿವಿಯ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ನೂತನ ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಸಹಕಾರ್ಯದರ್ಶಿ ಶಂಕರನಾರಾಯಣ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ದಾನಿ ಎಂ.ಎಸ್. ಮಂಜುನಾಥ್, ಷಡಾಕ್ಷರಿ, ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮಿ, ಉಪನ್ಯಾಸಕರಾದ ಸುಮಂತ್ಕುಮಾರ್, ಕೆಂಚಯ್ಯ, ವಿದ್ಯಾರ್ಥಿಗಳಾದ ಪ್ರಿಯಾಂಕ, ಶಶಾಂಕ್ ಉಪಸ್ಥಿತರಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.










