ಚಿಕ್ಕಬಳ್ಳಾಪುರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಚಂದ್ರಮ್ಮ 8 ತಿಂಗಳ ಗರ್ಭಿಣಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಚಿತ್ತಾಪುರ ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಸಹೋದರ ಹಾಗೂ ಸಂಬಂಧಿಕರ ಜೊತೆ ಉದ್ಯಾನವನ ಎಕ್ಸ್ ಪ್ರೆಸ್ ಮೂಲಕ ಕಲಬುರಗಿಗೆ ಪ್ರಯಾಣಿಸುತ್ತಿದ್ದರು.
ರೈಲು ಬೆಂಗಳೂರಿನಿಂದ ಯಲಹಂಕ ತಲುಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದರು. ಅದರಂತೆ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಇಳಿದು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ ಚಂದ್ರಮ್ಮ ಗೌರಿಬಿದನೂರು ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಹೆರಿಗೆ ನೋವು ಮತ್ತಷ್ಟು ಹೆಚ್ಚಾಗಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲೇ ಅವರಿಗೆ ಹೆರಿಗೆ ಆಗಿದೆ. ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.
ಹೆರಿಗೆಯ ನಂತರ ಇಬ್ಬರನ್ನು ಗೌರಿಬಿದನೂರು ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.










